'ನಿಂಗ್ಯಾಕೋ ಚುನಾವಣೆ, ಮಟನ್‌ನಂತೆ ಕೊಚ್ಚಿ ಹಾಕ್ತೇವೆ'
ಬೆಂಗಳೂರು, ಆಗಸ್ಟ್ 19 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ ಕರೆ ಬಂದಿದೆ. 'ಮಟನ್ ಕೊಚ್ಚಿದಂತೆ ಕೊಚ್ಚಿ ಹಾಕ್ತೇವೆ' ಎಂದು ದೂರವಾಣಿ ಕರೆ ಮೂಲಕದ ಬೆದರಿಕೆ ಹಾಕಲಾಗಿದೆ.
ಸುಬ್ರಮಣ್ಯ ನಗರ ವಾರ್ಡ್ (ನಂ 66) ಜೆಡಿಎಸ್ ಅಭ್ಯರ್ಥಿ ನಾಗರಾಜ್‌ಗೆ ಅನಾಮಿಕ ವ್ಯಕ್ತಿಗಳು ಬೆದರಿಕೆ ಕರೆ ಮಾಡಿದ್ದಾರೆ. ಅಲ್ಲದೇ ನಾಗರಾಜ್ ಅವರ ಕಾರಿನ ಗಾಜನ್ನು ಪುಡಿ-ಪುಡಿ ಮಾಡಿದ್ದಾರೆ. ಬೆದರಿಕೆ ಕರೆ ಕುರಿತು ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. [ಶಿವಾಜಿನಗರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?]

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಾಜ್ ಅವರು, 'ನನ್ನ ವಿರೋಧಿಗಳು ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಮಾಡೋದು ಬಿಟ್ಟು ರಾಜಕೀಯಕ್ಕೆ ಬಂದಿದ್ದೀಯಾ?. ಮಟನ್ ಕೊಚ್ಚಿದಂತೆ ಕೊಚ್ಚಿ ಹಾಕ್ತೇವೆ. ಮಟನ್ ಅಂಗಡಿ ನೋಡಿದ್ದೀಯಾ?' ಎಂಬ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು. [ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಎಚ್ಡಿಕೆ ಸವಾಲು]
'ನಿನಗೆ ಯಾಕೋ ಚುನಾವಣೆ, ದೇವಸ್ಥಾನದಲ್ಲಿ ಪೂಜೆ ಮಾಡೋದು ಬಿಟ್ಟು ರಾಜಕೀಯ ಮಾಡ್ತೀಯಾ. ಇನ್ನೆರಡು ದಿನದಲ್ಲಿ ರಾಜಕೀಯ ಅಂದರೆ ಏನು ಎಂದು ತೋರಿಸುತ್ತೇವೆ' ಎಂದು ಧಮಕಿ ಹಾಕಿದ್ದಾರೆ ಎಂದು ನಾಗರಾಜ್ ತಿಳಿಸಿದರು. [ಬಿಬಿಎಂಪಿ ಚುನಾವಣೆ, ಬಹಿರಂಗ ಪ್ರಚಾರಕ್ಕೆ ಇಂದು ಸಂಜೆಯೇ ತೆರೆ]
ಈ ಬೆದರಿಕೆ ಕರೆ ಬಂದ ಬಳಿಕ ಇಂದು ಮುಂಜಾನೆ ನಾಗರಾಜ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ದುಷ್ಕರ್ಮಿಗಳು ಪುಡಿ-ಪುಡಿ ಮಾಡಿದ್ದಾರೆ. ನಾಗರಾಜ್ ಅವರು ಈ ಬೆದರಿಕೆ ಕರೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ನಾಗರಾಜ್ ಅವರಿಗೆ ಕರೆ ಮಾಡಿದವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಇಂದು ನಾಗರಾಜ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಆ.22ರಂದು ಬಿಬಿಎಂಪಿ ಚುನಾವಣೆಯ ಮತದಾನ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.












Click it and Unblock the Notifications