ಕರ್ನಾಟಕ ಸಚಿವ ಸಂಪುಟ ಸಭೆ; ಪ್ರಮುಖ ನಿರ್ಧಾರಗಳು
ಬೆಂಗಳೂರು, ನವೆಂಬರ್ 03; ರಾಜ್ಯದ ಎರಡು ಕಡೆ ಹೊಸ ಕ್ರಿಕೆಟ್ ಕ್ರೀಡಾಂಗಣ ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ ವಿವರಗಳನ್ನು ನೀಡಿದರು.
ಬಳ್ಳಾರಿಯಲ್ಲಿ ಕ್ರೀಡಾಂಗಣ ಮಾಡಲು KSCA ಗೆ 19.26 ಎಕರೆ ಜಮೀನು ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಕ್ರೀಡಾಂಗಣ ಮಾಡಲು 23.25 ಎಕರೆ ಜಮೀನು KSCA ಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದಿಸಲಾಗಿದೆ.

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಕರೆಯಲಾಗಿದ್ದ ಟೆಂಡರ್ ರದ್ದು ಪಡಿಸಲಾಗಿದೆ. ಹೊಸ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮತಿ ನೀಡಿದೆ.
ಬೆಂಗಳೂರು ರಸ್ತೆ ಅಭಿವೃದ್ಧಿಗೆ ಸಂಪುಟ ಸಭೆ ಅನುಮತಿ ನೀಡಿದ್ದು, ವರ್ತೂರು ಬಳಿ ಎಲಿವೇಟೆಡ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಅಂಕಿತ ಹಾಕಲಾಗಿದೆ. 1.3 ರಿಂದ 1.9 ಕಿ.ಮೀ. ವರೆಗೆ ವಿಸ್ತರಣೆಗಾಗಿ ಅನುಮತಿ ದೊರೆತಿದೆ. ತತ್ಸಂಬಂಧ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2095 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ.
262 ಹೊಸ 108 ಅಂಬ್ಯುಲೆನ್ಸ್ ಖರೀದಿಗೆ 98.9 ಕೋಟಿ ರೂ. ನೀಡಲು ಸಂಪುಟ ಅಸ್ತು ಎಂದಿದೆ.
ಇನ್ನೂ ಬಳ್ಳಾರಿಯಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಏರ್ಪೋರ್ಟ್ ನಿರ್ಮಾಣಕ್ಕೆ ಗಣಿ ಪ್ರದೇಶದಿಂದ ಸಂಗ್ರಹವಾಗುವ ಕೆಎಂಆರ್ಸಿ ಫಂಡ್ ಬಳಕೆ ಮಾಡಲಾಗುವುದು. 2008ರಲ್ಲಿ ತಮಿಳುನಾಡಿನ ಚೆನ್ನೈ ಮೂಲದ ಮಾರ್ಗ್ ಸಂಸ್ಥೆಗೆ ನೀಡಲಾಗಿದ್ದ ಗುತ್ತಿಗೆ ರದ್ದು ಪಡಿಸಲಾಗಿದೆ. 2010ರವರೆಗೆ ನಿರ್ಮಾಣ ಮಾಡದ ಕಾರಣ ಗುತ್ತಿಗೆ ರದ್ದುಪಡಿಸಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಕ್ಕೆ ಅಸ್ತು ಎನ್ನಲಾಗಿದೆ.

ಗುಜರಾತ್ ಮಾದರಿಯಲ್ಲಿ ಸ್ವಲ್ಪ ಬದಲಾಯಿಸಿಕೊಂಡು ರಾಜ್ಯದಲ್ಲಿ ಜಾರಿ ಮಾಡಲಾಗುವುದು. ತುಮಕೂರು, ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪನೆಯಾಗಲಿದೆ. ಇನ್ನು ಕೆಐಎಡಿಬಿಯಿಂದಲೇ ಮೇಲ್ವಿಚಾರಣೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಲ್ಲದೇ ಸಾರಿಗೆ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಯಾಗಲಿದೆ. ಕೇಂದ್ರ ಸಹಭಾಗಿತ್ವದಲ್ಲಿ 20.36 ಕೋಟಿ ವೆಚ್ಚದಲ್ಲಿ ಅಳವಡಿಕೆಗೆ ಅಸ್ತು ಎನ್ನಲಾಗಿದೆ.
ತಗಚಿಗೆರೆಯಲ್ಲಿ ಗೃಹ ಮಂಡಳಿಗೆ ಕೊಟ್ಟಿದ್ದ ಭೂಮಿಯಲ್ಲಿ ರೈತರಿಗೆ ನಿವೇಶನ ಮಾಡಿಕೊಡಲು ಸಂಪುಟ ಒಪ್ಪಿಗೆ ನೀಡಿದೆ.
ಗೋಕಾಕ್, ಕೌಜಲಗಿ ಸುತ್ತಮುತ್ತ ಏತ ನೀರಾವರಿ ಯೋಜನೆಗಾಗಿ 32 ಕೋಟಿ ರೂ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ.












Click it and Unblock the Notifications