52,500 ಕೋಟಿ ರುಪಾಯಿ ದಾನಕ್ಕೆ ಮುಂದಾದ ಅಜೀಂ ಪ್ರೇಮ್ ಜೀ
ಬೆಂಗಳೂರು, ಮಾರ್ಚ್ 14: ಇತ್ತೀಚೆಗಷ್ಟೇ ಭಾರತದ ಕೋಟ್ಯಧಿಪತಿಗಳು ಹಾಗೂ ಅದರಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಇರುವವರ ಹೆಸರನ್ನು ಫೋರ್ಬ್ಸ್ ಬಿಡುಗಡೆ ಮಾಡಿತ್ತು. ಇದೀಗ ಆ ಪಟ್ಟಿಯಲ್ಲಿ ಇರುವ ಶತ ಕೋಟ್ಯಧಿಪತಿ- ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜೀ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಹಾಗೂ ಉದಾರವಾದ ದಾನಕ್ಕೆ ಮುಂದಾಗಿದ್ದಾರೆ.
ತಮ್ಮ ಕಂಪನಿಯ ಷೇರಿನ ಶೇಕಡಾ 34ರಷ್ಟನ್ನು, ಅಂದರೆ $ 7.5 ಬಿಲಿಯನ್ (750 ಕೋಟಿ ಅಮೆರಿಕನ್ ಡಾಲರ್) ದಾನ ಮಾಡಲಿದ್ದಾರೆ. ಆ ಮೊತ್ತವನ್ನು ಭಾರತದ ರುಪಾಯಿಗಳಲ್ಲಿ ಹೇಳುವುದಾದರೆ 52,500 ಕೋಟಿಯನ್ನು ಸಮಾಜ ಸೇವಾ ಕಾರ್ಯಗಳಿಗೆ ದಾನ ಮಾಡಲಿದ್ದಾರೆ.
ಪ್ರೇಮ್ ಜೀ ಅವರು ನಡೆಸಿಕೊಂಡು ಬರುತ್ತಿರುವ ವಿಪ್ರೋ ಕಂಪನಿಯ ಷೇರುಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಷನ್ ಗೆ ಬಿಟ್ಟುಕೊಡಲಿದ್ದಾರೆ ಎಂದು ಸಂಸ್ಥೆಯ ಹೇಳಿಕೆಯಲ್ಲಿ ಬುಧವಾರ ತಿಳಿಸಲಾಗಿದೆ. ಇದರೊಂದಿಗೆ ಪ್ರೇಮ್ ಜೀ ಅವರು ಇಪ್ಪತ್ತೊಂದು ಬಿಲಿಯನ್ ಅಮೆರಿಕನ್ ಡಾಲರ್ ದಾನದ ಸಲುವಾಗಿಯೇ ನೀಡಿದಂತಾಗಿದೆ. ಅದರಲ್ಲಿ ವಿಪ್ರೋದ ಅರವತ್ತೇಳು ಪರ್ಸೆಂಟ್ ಆರ್ಥಿಕ ಮಾಲೀಕತ್ವವೂ ಒಳಗೊಂಡಿದೆ.

ಅಜೀಂ ಪ್ರೇಮ್ ಜೀ ಫೌಂಡೇಷನ್ ನೇರವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ನೂರೈವತ್ತಕ್ಕೂ ಹೆಚ್ಚು ಎನ್ ಜಿಒಗಳಿಗೆ ಆರ್ಥಿಕ ಅನುದಾನ ನೀಡುತ್ತದೆ. ಆ ಎನ್ ಜಿಒಗಳು ಬಡ ಮಕ್ಕಳು ಹಾಗೂ ತಳ ಸಮುದಾಯದ ಮಕ್ಕಳ ಶಿಕ್ಷಣದ ಸಲುವಾಗಿ ಕೆಲಸ ಮಾಡುತ್ತಿವೆ.
ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ಸ್ಥಾಪಿಸಿ, ಅಲ್ಲಿ ಶಿಕ್ಷಣ ಹಾಗೂ ಮಾನವ ಅಭಿವೃದ್ಧಿ ಕ್ಷೇತ್ರದ ವೃತ್ತಿಪರರ ತರಬೇತಿ ನೀಡಲಾಗುತ್ತಿದೆ. ಪದವಿ ಕಾರ್ಯಕ್ರಮಗಳು ಹಾಗೂ ಸಂಶೋಧನೆಗೆ ಅವಕಾಶ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಈ ವಿ.ವಿ. ಇದ್ದು, ಉತ್ತರ ಭಾರತದಲ್ಲೊಂದು ವಿ.ವಿ. ಸ್ಥಾಪಿಸುವ ಉದ್ದೇಶ ಇದೆ. ಸದ್ಯದಲ್ಲೇ ಬೆಂಗಳೂರಿನಲ್ಲಿರುವ ವಿ.ವಿ.ಯನ್ನು ಐದು ಸಾವಿರ ವಿದ್ಯಾರ್ಥಿಗಳು ಹಾಗೂ ನಾನೂರು ಬೋಧಕ ಸಿಬ್ಬಂದಿ ಒಳಗೊಂಡ ಸಂಸ್ಥೆಯಾಗಿ ಮಾಡಲಾಗುತ್ತದೆ.
ಅಂದಹಾಗೆ, ಎಪ್ಪತ್ಮೂರು ವರ್ಷದ ಬೆಂಗಳೂರು ಮೂಲದ ಅಜೀಂ ಪ್ರೇಮ್ ಜೀ ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ. ಬ್ಲೂಮ್ ಬರ್ಗ್ ನ ಜಾಗತಿಕ ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಐವತ್ತೊಂದನೇ ಸ್ಥಾನದಲ್ಲಿದ್ದಾರೆ ಅಜೀಂ ಪ್ರೇಮ್ ಜೀ.












Click it and Unblock the Notifications