ಅಯೋಧ್ಯೆ ತೀರ್ಪು: ಬೆಂಗಳೂರಿನಲ್ಲಿ ನಿಷೇಧಾಜ್ಞೆ, ಸಂಭ್ರಮಾಚರಣೆ ನಿಷಿದ್ಧ
Recommended Video
ಬೆಂಗಳೂರು, ನವೆಂಬರ್ 09: ಬೆಂಗಳೂರು ನಗರದಾದ್ಯಂತ ಶನಿವಾರ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ಅಯೋಧ್ಯೆ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ ತುರ್ತು ಸುದ್ದಿಗೋಷ್ಠಿ ಕರೆದ ಅವರು, ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಬೆಂಗಳೂರಿನಾದ್ಯಂತ ನಾಳೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿ 8 ಸಾವಿರ ಮಂದಿಯನ್ನು ನಿಯೋಜಿಸಲಾಗಿದ್ದು, 50 ಕೆಎಸ್ ಆರ್ ಪಿ, 30 ಸಿಎಆರ್ ಒಂದು ಸಿಆರ್ ಪಿಎಫ್ ತುಕಡಿಯನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಲ್ಲದೆ ನಗರದಾದ್ಯಂತ ಶನಿವಾರ ಬೆಳಿಗ್ಗೆ 6 ರಿಂದ ಮದ್ಯ ಮಾರಾಟ ನಿಷೇಧಿಸಲಾಗಿದ್ದು, ಸೆಕ್ಷನ್ 144 ಸಹ ಬೆಳಿಗ್ಗೆ 7 ರಿಂದ ಜಾರಿಗೆ ಬರಲಿದೆ. ರಾತ್ರಿ 12 ರವರೆಗೆ ಮುಂದುವರಿಯಲಿದೆ. ಈಗಾಗಲೇ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ತೀರ್ಪಿನ ನಂತರ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೂ ನಿಷೇಧ ಹೇರಲಾಗಿದೆ. ಎಂದು ಅವರು ತಿಳಿಸಿದರು.
ಹಾಗೇ ಮಾಧ್ಯಮಗಳಿಗೂ ಮನವಿ ಮಾಡಿಕೊಂಡ ಭಾಸ್ಕರ್ ರಾವ್, "ತೀರ್ಪು ಪ್ರಕಟಗೊಳ್ಳುವ ಮುನ್ನವೇ ಪ್ರಚೋದನಾತ್ಮಕ ವಿಡಿಯೋ, ಹೇಳಿಕೆಗಳನ್ನು ನೀಡಬೇಡಿ. ದಯವಿಟ್ಟು ಶಾಂತಿ, ಸುವ್ಯವಸ್ಥೆ ಕಾಪಾಡಲು ನೀವೂ ಸಹಕಾರ ನೀಡಿ" ಎಂದರು.












Click it and Unblock the Notifications