ಬೆಂಗಳೂರಿನಲ್ಲಿ ಮತ್ತೊಂದು ಎಟಿಎಂ ದೋಚಲು ಯತ್ನ

ಗುರುವಾರ ರಾತ್ರಿ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ನಾಯಾರಣಪುರದಲ್ಲಿರುವ ಎಚ್ ಡಿಎಫ್ ಸಿ ಬ್ಯಾಂಕ್ ಎಟಿಎಂ ಅನ್ನು ಕಳ್ಳರು ದೋಚಲು ಪ್ರಯತ್ನಿಸಿದ್ದಾರೆ. ಎಟಿಎಂ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಅದನ್ನು ಕದಿಯುವ ಸಾಹಸ ಮಾಡಿದ್ದಾರೆ. ಆದರೆ, ಅದು ಫಲ ನೀಡಿಲ್ಲ. (ಬೆಂಗಳೂರು ನಿಯಮ ಪಾಲಿಸದ 1037 ಎಟಿಎಂಗೆ ಬೀಗ)
ನ.19ರಂದು ಕಾರ್ಪೋರೇಷನ್ ಸರ್ಕಲ್ ನಲ್ಲಿನ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದ ನಂತರ ಭದ್ರತಾ ಸಿಬ್ಬಂದಿ, ಅಲರಾಂ ಮತ್ತು ಸಿಸಿಟಿವಿ ವ್ಯವಸ್ಥೆ ಇಲ್ಲದ ಎಟಿಎಂ ಅನ್ನು ಪೊಲೀಸರು ಮುಚ್ಚಿಸಿದ್ದರು. ಕೆ.ನಾರಾಯಣಪುರ ಎಟಿಎಂನಲ್ಲಿಯೂ ಭದ್ರತಾ ಸಿಬ್ಬಂದಿ ಇರದ ಕಾರಣ ಅದನ್ನು ಭಾನುವಾರ ರಾತ್ರಿಯಿಂದಲೇ ಮುಚ್ಚಲಾಗಿತ್ತು. (ಕೆನರಾ ಬ್ಯಾಂಕ್ ಎಟಿಎಂನಿಂದ 20 ಲಕ್ಷ ದೋಚಿದ ಕಳ್ಳರು)
ಇದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಲು ಮುಂದಾಗಿದ್ದಾರೆ. ಆದರೆ, ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ನೋಡಿ ತಮ್ಮ ಪ್ರಯತ್ನವನ್ನು ಬಿಟ್ಟು, ಸ್ಥಳದಿಂದ ಪರಾರಿಯಾಗಿದ್ದಾರೆ. ಎಟಿಎಂ ಬಾಗಿಲು ಮುರಿದು ಕಳ್ಳನೊಬ್ಬ ಎಟಿಎಂ ಪ್ರವೇಶಿಸಿದ ದೃಶ್ಯ ಎಟಿಎಂ ಸಿಸಿಟಿವಿಯಲ್ಲಿ ಸೆರೆಯಾಗಿದೆ.(ಬೆಂಗಳೂರು : ಎಟಿಎಂ ಯಂತ್ರವನ್ನೇ ಕದ್ದ ಕಳ್ಳರು!)
ಎಟಿಎಂ ಪ್ರವೇಶಿಸಿದ ಕೂಡಲೇ ಕಳ್ಳ ಸಿಸಿಟಿವಿ ಒಡೆದು ಹಾಕಿದ್ದಾನೆ. ಆದ್ದರಿಂದ ಹೆಚ್ಚಿನ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಕಳ್ಳರು ಎಟಿಎಂ ಯಂತ್ರವನ್ನು ಜಖಂಗೊಳಿಸಿದ್ದು, ಅದರಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದ್ದಾರೆ. ಆದರೆ, ಪೊಲೀಸರು ಬಂದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ. ಕೊತ್ತನೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications