ಸಚಿವ ಸಂಪುಟ ಸಭೆಯ ನಿರ್ಣಯಗಳು
ಬೆಂಗಳೂರು, ಅ, 31 : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಪುಂಟ ಸಭೆಯಲ್ಲಿ, ತಾಲೂಕಿಗೊಂದು ಜೆನೆರಿಕ್ ಔಷಧ ಮಳಿಗೆ ತೆರೆಯುವುದು, ನ್ಯಾ.ಪದ್ಮರಾಜ್ ಸಮಿತಿ ನೀಡಿರುವ ವರದಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ, ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದು ಮುಂತಾದ ನಿರ್ಣಯಗಳಿಗೆ ಅನುಮೋದನೆ ಪಡೆಯಲಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಸಂಜೆ ವಿಧಾನಸೌಧದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯ ನಡೆಯಿತು. ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಂಪುಟ ಸಭೆಯ ವಿವರಗಳನ್ನು ನೀಡಿದರು, ಜಿ ಕೆಟಗರಿ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ಕುರಿತು ನ್ಯಾ. ಪದ್ಮರಾಜ್ ಸಲ್ಲಿಸಿರುವ ವರದಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಲು ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ.25ರಿಂದ ಡಿ.6ರವೆರೆಗೆ ವಿಧಾನಮಂಡಲ ಅಧಿವೇಶ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ದೇವನಹಳ್ಳಿಯಲ್ಲಿ ನೌಕಾನೆಲೆಗೆ ಸ್ಥಾಪನೆಗೆ 84.38 ಎಕರೆ ಜಮೀನು ಮಂಜೂರು, ಗ್ರಾಮ ಪಂಚಾಯಿತಿಗೊಂದು ಆನ್‌ಲೈನ್ ಸೇವಾ ಕೇಂದ್ರ, ತಾಲೂಕಿಗೊಂದು ಜೆನೆರಿಕ್ ಔಷಧ ಮಳಿಗೆ ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ.
ಹಾಸನ ಮತ್ತು ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಾಸನಕ್ಕೆ 131 ಕೋಟಿ ರೂ., ಶಿವಮೊಗ್ಗಕ್ಕೆ 136 ಕೋಟಿ ರೂ. ಅನುದಾನವನ್ನು ನೀಡಿ 2014ರ ಮೇ ವೇಳೆಗೆ ಎರಡೂ ಕಾಲೇಜುಗಳಲ್ಲಿ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. (ಸಂಪುಟ ಸಭೆಯ ವಿವರಗಳು)

ಸಂಪುಟ ಉಪ ಸಮಿತಿ ರಚನೆ
ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಜಿ ಕೆಟಗರಿ ನಿವೇಶನ ಪಡೆದಿರುವ ಪ್ರಕರಣದ ಬಗ್ಗೆ ನ್ಯಾ.ಪದ್ಮರಾಜ್ ಸಮಿತಿ ನೀಡಿರುವ ವರದಿ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯು, ನಿವೇಶನ ಹಂಚಿಕೆಯ ಪ್ರತಿ ಪ್ರಕರಣದ ಬಗ್ಗೆಯೂ ಪರಿಶೀಲನೆ ನಡೆಸಲಿದ್ದು, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶಗಳ ಹಿನ್ನೆಲೆಯಲ್ಲಿ ಜಿ ಕೆಟಗೆರಿ ನಿವೇಶನ ಹಂಚಿಕೆ ಕುರಿತು ನಿಯಮಾವಳಿ ರೂಪಿಸಲಿದೆ.

ಬೆಳಗಾವಿಯಲ್ಲಿ ಅಧಿವೇಶನ
ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ನವೆಂಬರ್ 25 ರಿಂದ ಡಿಸೆಂಬರ್ 6ರವರೆಗೆ ನಡೆಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಒಟ್ಟು 10 ದಿನ ಅಧಿವೇಶನ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಹಾಗೂ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸುವ ಕುರಿತು ಪೂರ್ವಭಾವಿ ಸಭೆ ನಡೆಸಿದ್ದರು.

ಸಿಬಿಐ ಹೆಗಲಿಗೆ ತನಿಖೆ
ಬೇಲೆಕೇರಿ ಹಾಗೂ ಗೋವಾ ಬಂದರುಗಳಿಂದ ಅಕ್ರಮವಾಗಿ ಅದಿರು ರಫ್ತು ಮಾಡಿರುವ ಪ್ರಕರಣವನ್ನೂ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಗಣಿ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಬದಲಿಗೆ ತನಿಖೆಯ ಹೊಣೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ 2006ರಿಂದ 2010ರ ಅವಧಿಯಲ್ಲಿ ಚೆನ್ನೈ, ಕೃಷ್ಣಪಟ್ಟಣಂ, ಮಂಗಳೂರು, ಕಾರವಾರ, ಎಣ್ಣೂರು, ಕಾಕಿನಾಡ ಹಾಗೂ ವಿಶಾಖಪಟ್ಟಣಂ ಸೇರಿದಂತೆ ಏಳು ಬಂದರುಗಳ ಮೂಲಕ ಅದಿರು ರಫ್ತು ಮಾಡಲಾದ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ಮತ್ತೆ ಎರಡು ಬಂದರುಗಳನ್ನು ತನಿಖಾ ವ್ಯಾಪ್ತಿಗೆ ಸೇರಿಸಲಾಗಿದೆ.

ಆನ್ ಲೈನ್ ಸೇವೆಗೆ ಸಿದ್ಧ
ಸಕಾಲ ಸೇರಿದಂತೆ ಸರ್ಕಾರದ ಸೇವೆಗಳನ್ನೂ ಮೊಬೈಲ್ ಮೂಲಕ ಪಡೆಯುವ ಹಾಗೂ ದಿನದ 24 ಗಂಟೆಯೂ ಸೇವೆ ಒದಗಿಸುವ 'ಯುನೈಟೆಡ್ ಮೊಬೈಲ್ ಸರ್ವೀಸ್' ವ್ಯವಸ್ಥೆ ಒದಗಿಸುವ ಇ-ಗವರ್ನೆನ್ಸ್ ಇಲಾಖೆಯ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಆನ್‌ಲೈನ್ ಮೂಲಕ ತ್ವರಿತವಾಗಿ ಪಡೆಯಲು 'ಕಾಮನ್ ಸರ್ವೀಸ್ ಸೆಂಟರ್'ಗಳನ್ನು ಖಾಸಗಿ ಸಹಭಾಗಿತ್ವದಡಿ ಆರಂಭಿಸಲು ಅನುಮತಿ ನೀಡಲಾಗಿದೆ.

ಮತ್ತೂಂದು ಸಾಲ ಮನ್ನಾ ಯೋಜನೆ
ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್)ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪಡೆದಿರುವ ಸಾಲ ಮನ್ನಾ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಇದರ ಅನ್ವಯ 36 ಕೋಟಿ ರೂ. ಅಸಲು ಮತ್ತು 67 ಕೋಟಿ ರೂ. ಬಡ್ಡಿ ಸೇರಿ 97.49 ಕೋಟಿ ರೂ. ಸಾಲ ಮನ್ನಾ ಆಗಲಿದೆ.

ರೈಲ್ವೆ ಯೋಜನೆಗೆ ಅನುದಾನ
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಡೂರು-ಚಿಕ್ಕಮಗಳೂರು ರೈಲು ಮಾರ್ಗದ ನಡುವೆ ಅಗತ್ಯವಿರುವ ಕಡೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲು 50:50 ವೆಚ್ಚ ಭರಿಸುವ ಆಧಾರದಲ್ಲಿ 7.89 ಕೋಟಿ ರೂ. ನೀಡಲು ಸಭೆ ತೀರ್ಮಾನಿಸಿದೆ. ಬೆಂಗಳೂರು-ಮೈಸೂರು ಜೋಡಿ ರೈಲ್ವೆ ಮಾರ್ಗದಲ್ಲಿ ವಿದ್ಯುದೀಕರಣಕ್ಕೆ 50 ಕೋಟಿ ರೂ. ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.

ಶುದ್ಧ ಕುಡಿಯುವ ನೀರು
ವಿಶ್ವಬ್ಯಾಂಕ್ ನೆರವಿನಿಂದ ಬೆಳಗಾವಿ, ಗುಲ್ಬರ್ಗ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಹಣಕಾಸು ಆಯೋಗದ ಮೂಲಕ ಹಣ ಒದಗಿಸುವುದು ಹಾಗೂ ಮುಖ್ಯಮಂತ್ರಿಗಳ ನಿಧಿಯಡಿ ಪ್ರತಿ ಮಹಾನಗರ ಪಾಲಿಕೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನೀಡಲಾಗಿರುವ ತಲಾ 100 ಕೋಟಿ ರೂ.ನಲ್ಲಿ 50 ಕೋಟಿ ರೂ. ಹಣವನ್ನು ಈ ಯೋಜನೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.

ಇತರೆ ನಿರ್ಧಾರಗಳು
ನ್ಯಾಯಬೆಲೆ ಅಂಗಡಿ ನಡೆಸುತ್ತಿರುವವರಿಗೆ ಸಾಗಣೆ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಾಲ್ ಅಕ್ಕಿ, ಗೋದಿ, ಸಕ್ಕರೆಗೆ ನೀಡುತ್ತಿದ್ದ ಕಮೀಷನ್ 31 ರೂ. ನಿಂದ 36 ರೂ.ಗೆ ಹೆಚ್ಚಿಸುವುದು, 108 ಆರೋಗ್ಯ ಕವಚ ಯೋಜನೆಗೆ 94 ಆ್ಯಂಬುಲೆನ್ಸ್ ಖರೀದಿ, ಪ್ರತಿ ತಾಲೂಕಿನಲ್ಲೂ ಜೆನೆರಿಕ್ ಔಷಧ ಮಳಿಗೆ ಸ್ಥಾಪನೆ ಮುಂತಾದ ನಿರ್ಣಯಗಳಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.












Click it and Unblock the Notifications