ಬೆಂಗಳೂರು ಬನಶಂಕರಿ ದೇವಸ್ಥಾನದಲ್ಲಿ ಅಡಿಕೆ ತಟ್ಟೆಗಳು ಬ್ಯಾನ್: ಕಾರಣವೇನು?
ಬೆಂಗಳೂರು, ಫೆಬ್ರವರಿ 14: ಬೆಂಗಳೂರಿನಲ್ಲಿ ಅತ್ಯಂತ ಹಳೆಯ ಮತ್ತು ಶ್ರೀಮಂತ ದೇವಸ್ಥಾನ ಎಂದೆನಿಸಿಕೊಂಡಿರುವ ಬನಶಂಕರಿ ದೇವಸ್ಥಾನವನ್ನು ಇಷ್ಟಾರ್ಥಗಳ ಸಿದ್ಧಿಯ ದೇವಸ್ಥಾನ ಎಂದು ನಂಬಲಾಗುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರೆ ನಿಮ್ಮ ಕೋರಿಕೆಗಳು ನೆರವೇರುತ್ತದೆ ಎನ್ನುವ ಅಗಾಧ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ವಿಶೇಷವಾಗಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬನಶಂಕರಿ ದೇವಸ್ಥಾನ ಒಂದು ಮಹತ್ವದ ಆಚರಣೆಯೆಂದರೆ ಅರ್ಧ ಕತ್ತರಿಸಿದ ನಿಂಬೆ ಸಿಪ್ಪೆಯಲ್ಲಿ ಎಣ್ಣೆಯ ದೀಪಗಳನ್ನು ಬೆಳಗಿಸುವುದು. ನಿಂಬೆ ಹಣ್ಣಿನ ತಿರುಳನ್ನು ತೆಗೆದು ಅದರಲ್ಲಿ ಸಾಮಾನ್ಯ ದೀಪದಂತೆ ಎಣ್ಣೆ ಮತ್ತು ಬತ್ತಿಯನ್ನಿಟ್ಟು ದೀಪವನ್ನು ಬೆಳಗಲಾಗುತ್ತದೆ. ಹಾಗೂ ತುಪ್ಪದ ದೀಪಗಳನ್ನು ಹೆಚ್ಚಾಗಿ ಬೆಳಗಲಾಗುತ್ತದೆ.

ಬನಶಂಕರಿ ತಾಯಿಗೆ ತುಪ್ಪದ ದೀಪ ಹಚ್ಚಲು ಅಡಿಕೆ ತಟ್ಟೆಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ದೇವಸ್ಥಾನದಲ್ಲಿ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು. ಹೀಗಾಗಿ ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು, ದೇವಸ್ಥಾನದಲ್ಲಿ ಅಡಿಕೆ ತಟ್ಟೆಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದೆ.
ಅಡಿಕೆ ತಟ್ಟೆ ಬ್ಯಾನ್ ಮಾಡಿದ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ
ಬನಶಂಕರಿ ದೇವಸ್ಥಾನದಲ್ಲಿ ಪ್ರತಿನಿತ್ಯ ನೂರಾರು ಭಕ್ತರು ವಿಶೇಷ ದಿನಗಳಲ್ಲಿ ಸಾವಿರಾರು ಜನ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತುಪ್ಪದ ದೀಪಗಳನ್ನ ಹಚ್ಚುತ್ತಾರೆ. ಈ ವೇಳೆ ಬಳಿಸಿದ ಅಡಿಕೆ ತಟ್ಟೆಗಳನ್ನು ದೇವಸ್ಥಾನದಲ್ಲಿಯೇ ಎಸೆದು ಹೋಗುತ್ತಿದ್ದರು. ಇದರಿಂದ ದೇವಸ್ಥಾನದಲ್ಲಿ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು ಇದರ ವಿಲೇವಾರಿಯೂ ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸದ್ಯ ದೇವಸ್ಥಾನಲ್ಲಿ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬ್ಯಾನ್ ಮಾಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಹೀಗಾಗಿ ಬನಶಂಕರಿ ದೇವಿಗೆ ತುಪ್ಪದ ದೀಪದ ಹರಕೆ ಹೊತ್ತ ಭಕ್ತರು ಮನೆಯಿಂದಲೇ ತಟ್ಟೆಗಳನ್ನು ಸೇವೆಸಲ್ಲಿಸುತ್ತಿದ್ದು, ಇದರಿಂದ ದೇವಾಲಯದ ಸುತ್ತ ಅಡಿಕೆ ತಟ್ಟೆ ಹಾಗೂ ಇತರ ಕಸಗಳು ಕಡಿಮೆಯಾಗಿದೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಪ್ರತಿದಿನ ಪೂಜೆಗೆ ಬಳಸುವ ಹೂ, ಉಳಿದ ಅನ್ನ ಸಾಂಬಾರ್, ಅನ್ನದಾಸೋಹಕ್ಕ ಬಳಕೆ ಮಾಡಿದ ನಂತರ ತರಕಾರಿಗಳು, ಉಳಿದ ಹೂವು, ಹಣ್ಣುಗಳನ್ನು ಸಂಗ್ರಹಿಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಈ ಗೊಬ್ಬರವನ್ನ ಒಂದು ಕೆಜಿಗೆ 20 ರೂ ನಂತೆ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನಕ್ಕೆ ಲಾಭವೂ ಆಗುತ್ತಿದ್ದು, ಕಸ ಸಂಗ್ರಹವನ್ನು ನಿಯಂತ್ರಣಕ್ಕೆ ತಂದಂತಾಗಿದೆ.












Click it and Unblock the Notifications