ಬಿಬಿಎಂಪಿಯಿಂದ "ಕನ್ನಡ ವಿರೋಧಿ ಕ್ರಮ": ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪಾಠ!
ಬೆಂಗಳೂರು ಮಹಾನಗರ ಪಾಲಿಕೆಯು ತನ್ನ ಕೆಲಸಗಳಿಂದ ಜನರ ಅಸಮಾಧಾನಕ್ಕೆ ಕಾರಣವಾಗುವುದು ಹೊಸದಲ್ಲ. ದೇಶದ ಪ್ರತಿಷ್ಠಿತ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ಬಿಬಿಎಂಪಿ ಎಡವುತ್ತಲ್ಲೇ ಇರುತ್ತದೆ. ಆದರೆ, ಇದೀಗ ಕನ್ನಡ ಭಾಷೆ ಬಳಕೆಯ ವಿಚಾರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬೈಸಿಕೊಂಡಿದೆ. ಅದೇನು ಎನ್ನುವ ವಿವರ ಇಲ್ಲಿದೆ ನೋಡಿ..
ಈಚೆಗೆ ಕನ್ನಡ ನಾಮಫಲಕ ಹಾಗೂ ಕನ್ನಡ ಬಳಕೆಯ ವಿಚಾರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಡುತ್ತಿರುವ ಎಡವಟ್ಟು ಕನ್ನಡಿಗರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡವನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಬಿಬಿಎಂಪಿಯ ಮೇಲಿದೆ. ಆದರೆ, ಬಿಬಿಎಂಪಿಯೇ ಬೆಂಗಳೂರಲ್ಲಿ ಕನ್ನಡದಲ್ಲಿ ತಪ್ಪು ತಪ್ಪಾಗಿ ನಾಮಫಲಕವನ್ನು ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಬಿಬಿಎಂಪಿಯ ಭಾಷಾ ವಿರೋಧ ಹಾಗೂ ನಿರ್ಲಕ್ಷ್ಯ ಧೋರಣೆಗೆ ಕನ್ನಡ ಅಭಿವೃದ್ಧಿ ಪ್ರಧಿಕಾರವು ಕ್ಲಾಸ್ ತೆಗೆದುಕೊಂಡಿದೆ. ಬಿಬಿಎಂಪಿಯು ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಬೇಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ವಿರೋಧಿ ನಿಲುವು ಪ್ರದರ್ಶಿಸುತ್ತಿರುವುದು ವಿಷಾದನೀಯ ಎಂದು ಪ್ರಾಧಿಕಾರ ಹೇಳಿದೆ.
ವರದಿ ನೀಡಲು ಸೂಚನೆ: ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯತನಕ್ಕೆ ಪ್ರಾಧಿಕಾರ ಚಾಟಿ ಬೀಸಿದೆ. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ರಸ್ತೆಗಳ ನಾಮಫಲಕ ಸೇರಿದಂತೆ ವಿವಿಧ ವಿಷಯಗಳಲ್ಲಿ ಕನ್ನಡ ಭಾಷೆ ಕಡೆಗಣನೆಗೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕ್ರಮ ತೆಗೆದುಕೊಂಡಿರುವ ವರದಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಬೆಂಗಳೂರಿನ ನಾಮಫಲಕದಲ್ಲಿ ಕನ್ನಡವನ್ನು ತಪ್ಪಾಗಿ ಬಳಸಿರುವುದು ಹಾಗೂ ಬಿಬಿಎಂಪಿ ಆಯೋಜಿಸಿದ್ದ ನಾಯಿಗಳಿಗೆ ಆಹಾರ ನೀಡುವ ಯೋಜನೆಗೆ ಕನ್ನಡದ ಪದ ಬಳಕೆ ಮಾಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ. ಈಚೆಗೆ ಬೆಂಗಳೂರಿನ ನಾಮಫಲಕವೊಂದರಲ್ಲಿ ತಪ್ಪು ಕನ್ನಡವನ್ನು ಬಳಸಲಾಗಿತ್ತು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಬೆಂಗಳೂರಿನಲ್ಲಿ ನಾಯಿಗಳಿಗೆ ದಿನದಲ್ಲಿ ಒಂದು ಸಮಯ ಆಹಾರ ನೀಡುವ ಯೋಜನೆಗೆ ಕುಕುರ್ ತಿಹಾರ್ ಎನ್ನುವ ಹೆಸರಿಟ್ಟು ಕನ್ನಡಿಗರ ಕೆಂಗಣ್ಣಿಗೆ ಬಿಬಿಎಂಪಿ ಗುರಿಯಾಗಿತ್ತು.
ಭಾಷಾ ವಿರೋಧಿ ಕ್ರಮ ಎಂದ ಪ್ರಾಧಿಕಾರ: ಇನ್ನು ಬಿಬಿಎಂಪಿಯು ಈಚೆಗೆ ಆಯೋಜಿಸಿದ್ದ ಬೀದಿ ನಾಯಿಗಳಿಗೆ ಆಹಾರ ನೀಡುವ ಉತ್ಸವಕ್ಕೆ ಕನ್ನಡದ ಪದವನ್ನು ನಿರ್ಲಕ್ಷ್ಯಿಸಿ ಕುಕುರ್ ತಿಹಾರ್ ಎನ್ನುವ ಪದ ಬಳಕೆ ಮಾಡಲಾಗಿದೆ. ಇದಕ್ಕೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಂಡವಾಗಿದೆ. ಕುಕುರ್ ತಿಹಾರ್ ಎನ್ನುವ ಪದವನ್ನು ಬಳಕೆ ಮಾಡುವಾಗ ಕನ್ನಡ ಸಂಸ್ಕೃತಿ ನೆನಪಾಗಲಿಲ್ಲವೇ ಎಂದು ಪ್ರಾಧಿಕಾರ ಪ್ರಶ್ನೆ ಮಾಡಿದೆ.
ಮುಂದುವರಿದು ಬಿಬಿಎಂಪಿಯಂತಹ ಸಂಸ್ಥೆಗಳಲ್ಲೇ ಕನ್ನಡ ವಿರೋಧಿ ಕ್ರಮಗಳಿಗೆ ಮುಂದಾದರೆ ಹೇಗೆ. ಈ ರೀತಿಯಾದರೆ ನಮ್ಮದೇ ನೆಲದಲ್ಲಿ ಕನ್ನಡ ಭಾಷೆಗೆ ಸಿಗಬೇಕಾಗಿರುವ ಪ್ರಮುಖ್ಯತೆ ಕಡಿಮೆಯಾಗಲಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.












Click it and Unblock the Notifications