Bengaluru 48th Annual Cake Show : ಕೇಕ್‌ನಲ್ಲಿ ಅರಳಿದ 28 ಆಕೃತಿಗಳು, ಕ್ಯಾಥೋಲಿಕ್ ಚರ್ಚ್ ಮುಖ್ಯ ಆಕರ್ಷಣೆ
ಬೆಂಗಳೂರು, ಡಿಸೆಂಬರ್ 15: ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಪ್ರಯುಕ್ತ '48ನೇ ವಾರ್ಷಿಕ ಕೇಕ್ ಪ್ರದರ್ಶನ' ನಡೆಯುತ್ತಿದೆ. ಸಕ್ಕರೆ, ಕೇಕ್ ಬಳಸಿ ನಾನಾ ಆಕೃತಿಗಳನ್ನು ಕೇಕ್‌ನಲ್ಲಿ ಪ್ರದರ್ಶನಕ್ಕಿದ್ದು, ಜನವರೆ 1ರವರೆಗೆ ಕಣ್ತುಂಬಿಕೊಳ್ಳಲು ಅವಕಾಶ ಇದೆ.
ಯುಬಿ ಸಿಟಿಯ ಸೆಂಟ್ ಜೋಸೆಫ್ ಶಾಲಾ ಆವರಣದಲ್ಲಿ ಶುಗರ್ಸ್ ಸ್ಕಲ್‌ಪ್ಟ್ ಅಕಾಡೆಮಿ ವತಿಯಿಂದ ವಾರ್ಷಿಕ ಕೇಕ್ ಪ್ರದರ್ಶನ ನಡೆಯುತ್ತಿದೆ. ಇಲ್ಲಿ ಬೃಹದಾಕಾರದ ಅಮೇರಿಕಾದ ಕ್ಯಾಥೋಲಿಕ್ ಚರ್ಚ್, ಬೇಲೂರಿನ ಶಿಲ್ಪಕಲೆ, ಮೈಸೂರಿನ ದಸರಾ ಆನೆ, ಪ್ಯಾರಿಸ್ ಐಫಿಲ್ ಟವರ್, ಭಾರತೀಯ ಶಸ್ತ್ರಚಿಕಿತ್ಸೆ ಪದ್ಧತಿ, ಪರಿಸ್ನೇಹಿ ಕಾರು (ಇವಿ) ಸೇರಿದಂತೆ ಪಾರಂಪರಿಕತೆ ಬಿಂಬಿಸುವ 28 ವಿವಿಧ ಕಲಾಕೃತಿಗಳು ಒಂದೇ ಸೂರಿನಡಿ ವೀಕ್ಷಿಸಬಹುದು.
ನಿತ್ಯ ಬೆಳಗ್ಗೆ 11ಗಂಟೆಯಿಂದ ರಾತ್ರಿ 9ಗಂಟೆವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಇದೆ. ಎಲ್ಲ ತರಹದ ಈ ಆಕೃತಿಗಳಿಗೆ ತಯಾರಿಕೆಗೆ ಒಟ್ಟು ಸುಮಾರು 5,265 ಕೆ.ಜಿ. ಕೇಕ್ ಬಳಸಲಾಗಿದೆ. ಇದರೊಂದಿಗೆ ಅತ್ಯಂತ ಬೃಹತ್ ಆಕಾರದ ಕ್ಯಾಥೋಲಿಕ್ ಚರ್ಚ್ ನಮ್ಮನ್ನು ಆಕರ್ಷಿಸುತ್ತದೆ. ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ. ಪ್ರತಿ ವ್ಯಕ್ತಿಗೆ 100 ರೂ. ಪ್ರವೇಶ ದರವಿದೆ ಎಂದು ಅಕಾಡೆಮಿಯ ಬಿ.ವಿ. ಹರೀಶ್ ತಿಳಿಸಿದರು.

20 ಅಡಿ ಎತ್ತರದ ಬೃಹತ್ ಕ್ಯಾಥೋಲಿಕ ಚರ್ಚ್
ಕ್ಯಾಥೆಡ್ರೆಲ್ ಬೆಸಿಲಿಕಾ ಆಫ್ ದಿ ಸೇಕ್ರೆಡ್ ಹಾರ್ಟ್, ಉತ್ತರ ಅಮೇರಿಕಾದಲ್ಲಿನ ಐದನೇ ಅತೀ ದೊಡ್ಡ ಕ್ಯಾಥೆಡ್ರೆಲ್ ಆಗಿದೆ. ಇದು ನೇವಾರ್ಕ್‌ನ ರೋಮ್‌ನ ಕ್ಯಾಥೋಲಿಕ್ ಆಗಿದೆ. ಇದು ಗೋಥಿಕ್ ರಿವೈವಲ್ ಶೈಲಿಯ ವಾಸ್ತುಶಿಲ್ಪ ಅಥವಾ ಫ್ರೆಂಚ್ ಗೋಥಿಕ್ ವಾಸ್ತುಶಿಲ್ಪದಲ್ಲಿ ಸಿದ್ಧವಾಗಿದೆ. ಇದರ ನಿರ್ಮಾಣ 1899ರಲ್ಲಿ ಆರಂಭವಾಗಿ 1945ರಲ್ಲಿ ಪೂರ್ಣಗೊಂಡಿತ್ತು. ಇಂತಹ ಬೃಹತ್ ಚರ್ಚ್ ಅನ್ನು ಅದೇ ಶೈಲಿಯಲ್ಲಿ ಕೇಕ್‌ನಲ್ಲಿ ನಿರ್ಮಿಸುವುದು ಸವಾಲಾಗಿತ್ತು. ಒಟ್ಟು 15 ಅಡಿ ಅಗಲ, 15ಅಡಿ ಉದ್ದ ಮತ್ತು 20ಅಡಿ ಎತ್ತರವಿದೆ. ಇದನ್ನು ಮೂರುವರೆ ತಿಂಗಳಲ್ಲಿ ಅಕಾಡೆಮಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ್ದಾರೆ. ಇದು ಕೇಕ್ ಪ್ರದರ್ಶನದ ಪ್ರಮುಖ ಕೇಂದ್ರ ಬಿಂದು ಆಗಿದೆ.

ಕೇಕ್‌ನಲ್ಲಿ ಪರಿಸರ ಸ್ನೇಹಿ ಕಾರು
ಜಗತ್ತಿನ ತಂತ್ರಜ್ಞಾನ ಬೆಳೆದಂತೆಲ್ಲ ಎಲ್ಲವು ಬದಲಾಗುತ್ತಿದೆ. ಇದಕ್ಕೆ ವಾಹನಗಳು ಹೊರತಾಗಿಲ್ಲ. ದೇಶಾದ್ಯಂತ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ಸ್ಥಾನವನ್ನು ಈ ಎಲೆಕ್ಟ್ರಿಕ್ ವಾಹನಗಳು (ಇವಿ) ತುಂಬುತ್ತಿವೆ. ಜನರು ನಿಧಾನವಾಗಿ ಇವಿಗಳತ್ತ ವಾಲುತ್ತಿದ್ದಾರೆ. ಅದರ ಮಹತ್ವ ಸಾರುವಂತೆ ಈ ಪ್ರದರ್ಶನದಲ್ಲಿ 'ಪರಿಸರಿ ಸ್ನೇಹಿ ಕಾರು' ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರುಗಳ ಚಾರ್ಜ್‌ರ್ ಸ್ಟಾಂಡ್‌ನಿಂದ ಚಾರ್ಜ್ ಮಾಡಿಕೊಳ್ಳುತ್ತಿರುವ ರೀತಿಯಲ್ಲಿ ಕೇಕ್ ಆಕೃತಿ ತಯಾರಿಸಲಾಗಿದೆ. ಒಟ್ಟು 20ದಿನದಲ್ಲಿ 120ಕೀಲೋ ತೂಕದಲ್ಲಿ 4x4 ಅಳತೆಯಲ್ಲಿ ತಯಾರಿಸಲಾಗಿದೆ.

'ಅಶೋಕ ಸ್ತಂಭ ಧಮ್ಮದ ಸ್ತಂಭ' ಆಕೃತಿ
ಕ್ರಿಸ್ತ ಪೂರ್ವ 250ರಲ್ಲಿ ಮೌರ್ಯ ಚಕ್ರವರ್ತಿ ಅಶೋಕ್‌ನಿಂದ ಸಾರಾನಥ್‌ದಲ್ಲಿ ಈ 'ಅಶೋಕ ಸ್ತಂಭ ಧಮ್ಮದ ಸ್ತಂಭ' ನಿರ್ಮಿಸಲಾಯಿತು. ಇದು ಶಕ್ತಿ, ಶೌರ್ಯ, ಆತ್ಮ ವಿಶ್ವಾಸ ಮತ್ತು ಹೆಮ್ಮೆಯ ಸಂಕೇತವನ್ನು ತೋರಿಸುವ ಭಾರತೀಯ ರಾಷ್ಟ್ರೀಯ ಲಾಂಛನ ಮೇಲೆ ನಾಲ್ಕು ಸಿಂಹಗಳನ್ನು ಪ್ರತಿನಿಧಿಸುತ್ತದೆ. ಸಿಂಹಗಳು ನಾಲ್ಕು ದಿಕ್ಕಿನಲ್ಲಿ ಧರ್ಮದ ಸಂದೇಶ ಸಾರುವಂತೆ ಅಶೋಕನ ಕಾಲದಲ್ಲಿ ರಚಿಸಲಾಗಿದೆ. ಇಂತಹ ಸ್ತಂಭ ಆಕೃತಿಯನ್ನು ಕೇಕ್ ತಯಾರಿಸಿ ಪ್ರದರ್ಶನದಲ್ಲಿ ಇಡಲಾಗಿದೆ. ಇದು ಒಟ್ಟು 430ಕೆ.ಜಿ ಇದೆ. 6ಅಡಿ ಎತ್ತರವಿದ್ದು, 12ದಿನಗಳ ಕಾಲ ತಯಾರಿಸಲಾಗಿದೆ.

'ಸಾಂಪ್ರದಾಯಿಕ ಪುಷ್ಪಗಳ ವಿವಾಹ ಕೇಕ್' ಆಕೃತಿ
ಈ 'ಸಾಂಪ್ರದಾಯಿಕ ಪುಷ್ಪಗಳ ವಿವಾಹ ಕೇಕ್' ಆಕೃತಿಯನ್ನು ತಾವರೆ, ಮಲ್ಲಿಗೆ, ಗುಲಾಬಿಗಳು, ಚೆಂಡು ಹೂಗಳಿಂದ ಅಲಂಕರಿಸಲಾಗಿದೆ. ತಾವರೆಯ ಪಾಚಿ ಹಿಡಿದ ದಟ್ಟ ಮಂಜು ಮುಸಿಕಿನ ನೀರಿನಲ್ಲಿ ಬೆಳೆಯುವುದರಿಂದ ಅದು ಶುದ್ಧ ಮತ್ತು ಸ್ಥಿತಿತಾಪಕತ್ವವನ್ನು ಸಂಕೇತಿಸುತ್ತದೆ. ಬಿಳಿ ಮಲ್ಲಿಗೆ ಹೂಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಹೊಳೆಯುತ್ತವೆ. ಸೌಂದರ್ಯ ಮತ್ತು ಇಂದ್ರೀಯವನ್ನು ಮಲ್ಲಿಗೆ ಸಂಕೇತಿಸುತ್ತದೆ. ಗುಲಾಬಿ ಪ್ರೀತಿ-ಪ್ರಣಯವನ್ನು ಸೂಚಿಸುತ್ತದೆ. ಒಂದೇ ಹೂವಿನ ವಿವಿಧ ಬಣ್ಣಗಳು ವಿವಿಧ ಅರ್ಥ ಸೂಚಿಸುತ್ತವೆ. ಈ ಹೂಗಳ ವಿಶಿಷ್ಟತೆ ತೋರಿಸಲು ಸಾಂಪ್ರದಾಯಿಕ ಪುಷ್ಕಗಳ ವಿವಾಹ ಕೇಕ್ ಅನ್ನು ಸಿದ್ದಪಡಿಸಿದ್ದೇವೆ. 130ಕೆಜಿ ತೂಕ ಹೊಂದಿದ್ದು, 3x5 ಅಡಿ ವ್ಯಾಪ್ತಿಯಲ್ಲಿ 12ದಿನಗಳ ಸಮಯದಲ್ಲಿ ಈ ಆಕೃತಿ ತಯಾರಿಸಲಾಗಿದೆ.

ಮಳೆ, ಗಾಳಿ ಸವಾಲಿನ ಮಧ್ಯೆ ಅರಳಿದ ಆಕೃತಿಗಳು
ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರಿತ್ಯದಿಂದ ಬೆಂಗಳೂರಲ್ಲಿ ಜೋರು ಮಳೆ ಅರಂಭವಾಗಿತ್ತು. ಒಂದು ವಾರ ಮಳೆ, ಚಳಿ ಗಾಳಿ ವಾತಾವರಣ ನಿರ್ಮಾಣವಾಗಿತ್ತು. ಇದು ಕೇಕ್ ಆಕೃತಿ ತಯಾರಿಸಲು ತೊಂದರೆ ನಿಡೀತ್ತು. ಅಂತಹ ಸವಾಲುಗಳ ಮಧ್ಯೆ ಆಕೃತಿ ತಯಾರಿಸಲಾಗಿದೆ. ಇವುಗಳ ತಯಾರಿಕೆಗೆ ಕೇಕ್, ಸಕ್ಕರೆ, ಬಣ್ಣದ ಪದಾರ್ಥ ಬಳಸಿದ್ದರಿಂದ ಅದು ಕರಗದಂತೆ ಬೇಕಾದ ಉಷ್ಣಾಂಶ ನೀಡುತ್ತಿದ್ದೇವೆ ಎಂದು ಇನ್ಸಟಿಟ್ಯೂಟ್ ಆಫ್ ಬೇಕಿಂಗ್ ಅಂಡ್ ಕೇಕ್ ಆರ್ಟ್ ತರಬೇತಿ ಸಂಸ್ಥೆೆ ನಿರ್ದೇಶಕ ಮನೀಶ್ ಗೌರ್ ವಿವರಿಸಿದರು.












Click it and Unblock the Notifications