Darshan Toogudeepa: ಇಂದು ನಟ ದರ್ಶನ್ ನ್ಯಾಯಾಂಗ ಬಂಧನ ಅಂತ್ಯ: ಡಿ.ಬಾಸ್ ಭವಿಷ್ಯವೇನು
ಬೆಂಗಳೂರು, ಸೆಪ್ಟಂಬರ್ 12: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ, ನಟಿ ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ನ್ಯಾಯಾಂಗ ಬಂಧನ ಅವಧಿ ಇಂದು ಗುರುವಾರಕ್ಕೆ (ಸೆಪ್ಟಂಬರ್ 12) ಅಂತ್ಯವಾಗಿದೆ. ಇಂದು ಎಸಿಎಂಎಂ ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆ ನಡೆಯಲಿದ್ದು, ದರ್ಶನ್ ಭವಿಷ್ಯ ಏನಾಗಲಿದೆ? ಎಂಬ ಕುತೂಹಲ ಹೆಚ್ಚಾಗಿದೆ.
ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಎಲ್ಲ ಆರೋಪಿಗಳ ಮೇಲಿನ ದೋಷಾರೋಪ ಪಟ್ಟಿ ಈಗಾಗಲೇ ಸಲ್ಲಿಕೆಯಾಗಿದ್ದು, ಕಳೆದ ಸೆಪ್ಟಂಬರ್ 9ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಅಂದು ವಿವಿಧ ಜೈಲುಗಳಿಂದಲೇ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ಅಂದು ನ್ಯಾಯಾಲಯ ದರ್ಶನ್ ನ್ಯಾಯಾಂಗ ಬಂಧನ ಸೆ.12ರವರೆಗೆ ವಿಸ್ತರಣೆ ಮಾಡಿತ್ತು. ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಡಿಜಿಟಲ್ ಸಾಕ್ಷ್ಯಧಾರ ಸೇರಿ ಒಟ್ಟು 60 ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರ ಬೆನ್ನಲ್ಲೆ ನಟ ದರ್ಶನ್ ಚಾರ್ಜ್‌ಶೀಟ್ ನಲ್ಲಿರುವ ಮಾಹಿತಿ ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕು ಎಂಬ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿತು.
ಇಂದು ದರ್ಶನ್ ಭವಿಷ್ಯ ನಿರ್ಧಾರ ಸಾಧ್ಯತೆ
ಇಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ. ಇದರೊಂದಿಗೆ 17 ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಹಿಂದೆ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ತಿರಸ್ಕೃತಗೊಂಡಿತ್ತು. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಆಕೆಯು ಮತ್ತೊಮ್ಮೆ ಜಾಮೀನಿಗಾಗಿ ಮನವಿ ಮಾಡುವ ನಿರೀಕ್ಷೆ ಇದೆ. ಇಂದು ಆರೋಪಿಗಳ ಭವಿಷ್ಯ ಅದರಲ್ಲೂ ನಟ ದರ್ಶನ್ ಭವಿಷ್ಯ ನಿರ್ಧಾರವಾಗಬಹುದು.
ಬೆಂಗಳೂರಿನಿಂದ ಕಾರಾಗೃಹದಿಂದ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ಬಳಿಕ ವಿಶೇಷ ಕುರ್ಚಿ, ಟಿವಿ ವ್ಯವಸ್ಥೆ ಮಾಡಿಕೊಡಲಾಗಿದೆ. ಅಲ್ಲದೇ ಈ ಜೈಲಿನಲ್ಲಿ ಸಾಕಷ್ಟು ಭದ್ರತೆ, ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ದರ್ಶನ್ ಪರದಾಡಿದ್ದಾರೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಬೆಂಗಳೂರು ಜೈಲಿನಲ್ಲಿದ್ದಾಗ ಅವರಿಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿದ್ದವು. ವಿಲ್ಸನ್ ಗಾರ್ಡನ್ ರೌಡಿಶೀಟರ್ ನಾಗಾ ಸೇರಿದಂತೆ ಇನ್ನಿತರರ ಜೊತೆ ಕೂತ ಫೋಟೋ, ವಾಟ್ಸಾಪ್ ವಿಡಿಯೋ ಕಾಲ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ದರ್ಶನ್‌ಗೆ ಸಂಕಷ್ಟ ಎದುರಾಯಿತು. ಆನಂತರ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಅವರು ಇಂದು ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಹಾಜರಾಗಲಿದ್ದಾರೆ.












Click it and Unblock the Notifications