ಬೆಂಗಳೂರಲ್ಲಿ ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸುವವರ ಗಮನಕ್ಕೆ
ಬೆಂಗಳೂರು, ಫೆಬ್ರವರಿ 09: ಬೆಂಗಳೂರು ಮಹಾನಗರದಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಖಡಕ್ ಸೂಚನೆಯನ್ನು ಕರ್ನಾಟಕ ಹೈಕೋರ್ಟ್ ನೀಡಿದೆ. ಅಲ್ಲದೇ ನಗರದ ಫುಟ್‌ಪಾತ್ ಮೇಲೆ ನಿಂತಿರುವ ಅಪರಿಚಿತ ವಾಹನಗಳ ಬಗ್ಗೆಯೂ ಆದೇಶವೊಂದನ್ನು ನೀಡಿದೆ.
ಬೆಂಗಳೂರು ನಗರದ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿದೆ.

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜ.31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯ ನಿರ್ಣಯಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅಫಿಡೆವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ರಸ್ತೆಗಳಲ್ಲಿ ಬಿಟ್ಟು ಹೋಗಿರುವ ವಾಹನಗಳನ್ನು ಸ್ಥಳಾಂತರ ಮಾಡಲು 4 ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಮೂಲಕ ವಾಹನದ ಮಾಲೀಕರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ.
ಅಲ್ಲದೆ, ರಸ್ತೆ ಬದಿ ನಿಂತಲ್ಲೇ ನಿಂತಿರುವ ವಾಹನಗಳನ್ನು ತೆಗೆಯುವಂತೆ ಸ್ಟಿಕ್ಕರ್ ಅಳವಡಿಸಲಾಗುವುದು. 15 ದಿನಗಳ ನಂತರ ಆರ್‌ಟಿಒ ಕಚೇರಿಗೆ ತಂದು ಮಾಲೀಕರನ್ನು ಸಂಪರ್ಕಿಸಲಾಗುವುದು. ಮಾಲೀಕರು ಸಿಗದಿದ್ದರೆ ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುವುದು. ಆ ರೀತಿ ವಾಹನಗಳನ್ನು ಹರಾಜು ಹಾಕುವ ಮುನ್ನ ಪತ್ರಿಕಾ ಪ್ರಕಟಣೆ ನೀಡಲಾಗುವುದು ಎಂದು ವಿವರಿಸಲಾಗಿದೆ.
ಹರಾಜಿಗೆ ಕಾಲಮಿತಿ ನಿಗದಿ; ಈ ಅಫಿಡೆವಿಟ್ ಅನ್ನು ಒಪ್ಪಿದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿ ಅವಧಿಯನ್ನು ಕಡಿತಗೊಳಿಸಿತು. ಅದರಂತೆ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದ 30 ದಿನಗಳಲ್ಲಿ ಹರಾಜು ಹಾಕಬೇಕು.
1 ರಿಂದ 5 ವರ್ಷದ ವಾಹನಗಳನ್ನು ಮೂರು ತಿಂಗಳಲ್ಲಿ ಹಾಗೂ 5 ರಿಂದ 15 ವರ್ಷದ ವಾಹನಗಳನ್ನು ಹರಾಜು ಹಾಕಬೇಕು. ಅದರ ಪ್ರಗತಿ ಆಧರಿಸಿ ಪೊಲೀಸರು ನ್ಯಾಯಾಲಯದಿಂದ ಮುಂದಿನ ನಿರ್ದೇಶನಗಳನ್ನು ಕೋರಬಹುದು ಎಂದು ಹೇಳಿ ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿತು.
ಅಲ್ಲದೇ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯ 609.89 ಕಿ. ಮೀ. ಮತ್ತು 734.45 ಕಿ. ಮೀ. ಉಪ ಮುಖ್ಯರಸ್ತೆಗಳ ಪಾದಚಾರಿ ಮಾರ್ಗದ ಮೇಲೆ ಶಾಶ್ವತ ಹಾಗೂ ಉಪ ಶಾಶ್ವತ ನಿರ್ಮಾಣಗಳನ್ನು ಅನುಮತಿಸುವುದಿಲ್ಲ. ಪಾದಚಾರಿ ಮಾರ್ಗಗಳ ಒತ್ತುವರಿ ಗುರುತಿಸಿ, ತೆರವುಗೊಳಿಸಲು ಕಾಲಕಾಲಕ್ಕೆ ವಿಶೇಷ ಕಾರ್ಯಚರಣೆ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ, ವಸತಿ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ಮಳಿಗೆಗಳನ್ನು ಇಟ್ಟುಕೊಂಡು ಒತ್ತುವರಿ ಮಾಡಿರುವುದು ಕಂಡುಬಂದಿದೆ. ಈ ಸಮೀಕ್ಷೆ ನಡೆಸಿ ಈ ಒತ್ತುವರಿ ತೆರವು ಮಾಡಲಾಗುತ್ತದೆ. ಇದಕ್ಕೆ ಭದ್ರತೆ ಒದಗಿಸಲು ಪೊಲೀಸರು ಸಹ ಒಪ್ಪಿಗೆ ನೀಡಿದ್ದಾರೆ ಎಂದು ಅಫಿಡೆವಿಟ್‌ನಲ್ಲಿ ಹೇಳಿದ್ದಾರೆ.












Click it and Unblock the Notifications