BBMP Property Tax: ವಿಜಯ ಮಲ್ಯ, ಎಂಬೆಸ್ಸಿಯಂಥ ಪ್ರತಿಷ್ಠಿತರಿಂದ ಕರ ವಸೂಲಿ ಮಾಡಿ 'ಡಿಕೆಶಿ' ಮಾದರಿ ಆಗಲಿ!
ಬೆಂಗಳೂರು, ಸೆಪ್ಟಂಬರ್ 02: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು ಸುಮಾರು 900 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿದಕೊಂಡಿದೆ. ಬಹುದಿನಗಳಿಂದ ಸಂಗ್ರಹವಾಗದೇ ಬಾಕಿ ಇದ್ದು, ಇದರಲ್ಲಿ ಪ್ರತಿಷ್ಠತ ವ್ಯಕ್ತಿಗಳ ಆಸ್ತಿ ತೆರಿಗೆಯೇ ಹೆಚ್ಚಾಗಿ ಬಾಕಿ ಉಳಿದಿರುವುದು ಗೊತ್ತಾಗಿದೆ. ತೆರಿಗೆ ಕಟ್ಟದೆ ಯಾಮಾರಿಸುತ್ತಿರುವವರಿಗೆ ರಾಜಕಾರಣಿಗಳ ಕುಮ್ಮಕ್ಕು ಇದೆ. ಪ್ರತಿಷ್ಠಿತರಿಂದ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪಿಸಿದರು.
ಸೋಮವಾರ ಬೆಂಗಳೂರಿನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ಬಾಡಿಗೆ ಕಟ್ಟುತ್ತಿಲ್ಲ ಎಂದು ಕಾರಣ ನೀಡಿ ಬಿಬಿಎಂಪಿ ಕಟ್ಟಡದಲ್ಲಿದ್ದ ಎರಡು ಅಂಚೆ ಕಚೇರಿಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ 900 ರಿಂದ 1000 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದರೂ, ಅವರು ಪ್ರತಿಷ್ಠಿತರು ಎಂಬ ಕಾರಣಕ್ಕೆ ಬಿಬಿಎಂಪಿ ನೋಟಿಸ್ ಜಾರಿ ಮಾಡು ಧೈರ್ಯ ತೋರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತೆರಿಗೆ ಕಟ್ಟದವರ ಆಸ್ತಿಗಳನ್ನು ಬಿಬಿಎಂಪಿ ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ವಿಜಯ್ ಮಲ್ಯ ಅವರ ಯುನೈಟೆಡ್ ಬ್ರಿವರೀಸ್, ಎಂಬೆಸ್ಸಿ ಗ್ರೂಪ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ.
ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿನಾಥ್, ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರೇ ಈ ಬಗ್ಗೆ ಮೊದಲು ಗಮನ ಹರಿಸಿ, ಸರ್ಕಾರಕ್ಕೆ ಮೋಸ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಅವರು ಆಗ್ರಹಿಸಿದರು.

ಕ್ರಮ ಕೈಗೊಂಡು ಡಿಕೆಶಿ ಮಾದರಿ ಆಗಲಿ
ಮೊದಲೆಲ್ಲಾ ಬಿಬಿಎಂಪಿಗೆ ತೆರಿಗೆ ಕಟ್ಟದೇ ಇದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿತ್ತು. ಇದೀಗ ಕಾರ್ಪೊರೇಟರ್, ಶಾಸಕರು, ಅಧಿಕಾರಿಗಳು ಶಾಮೀಲಾಗಿದ್ದು ತೆರಿಗೆ ಕಟ್ಟದವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದರು. ಜನ ರೊಚ್ಚಿಗೇಳುವ ಮೊದಲು ಬಿಬಿಎಂಪಿ ಮತ್ತು ಸಚಿವ ಡಿಕೆ ಶಿವಕುಮಾರ್ ಎಚ್ಚೆತ್ತು, ತೆರಿಗೆ ಕಟ್ಟದ ಪ್ರಭಾವಿಗಳ ಮೇಲೆ ಕ್ರಮ ತೆಗೆದುಕೊಂಡು ಮಾದರಿಯಾಗಬೇಕು ಎಂದು ಒತ್ತಾಯಿಸಿದರು.
ತೆರಿಗೆ ಕಟ್ಟದೇ ಲಾಭ ಪಡೆಯುತ್ತಿದ್ದಾರೆ?
ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಬಿಬಿಎಂಪಿ ಏನೋ ತೆರಿಗೆ ಬಾಕಿ ಇರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಆದರೆ ಅವರಿಂದ ತೆರಿಗೆ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಿದರೆ ರಾಜಕೀಯ ಬೆಂಬಲ ಇರುವವರು ಯಾವ ರೀತಿ ಲಾಭ ಪಡೆಯುತ್ತಿರುವುದು ಗೊತ್ತಾಗುತ್ತದೆ.
ಬ್ರಾಂಡ್ ಬೆಂಗಳೂರು ಎಂದು ಡಿಕೆ ಶಿವಕುಮಾರ್ ದೊಡ್ಡದಾಗಿ ಹೇಳುತ್ತಿದ್ದಾರೆ. ಅವರ ಸ್ನೇಹಿತರು, ಪರಿಚಯದವರೇ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಒಟಿಎಸ್ ಯೋಜನೆಯಲ್ಲಿ 3.95 ಲಕ್ಷ ಜನ ಬೆಂಗಳೂರಿನಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದರೆ, ಯಾವ ರೀತಿಯ ಅಭಿವೃದ್ಧಿ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದರು. ಒಟಿಎಸ್ ಯೋಜನೆಯಡಿ 1 ಲಕ್ಷ ಜನ 150 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾರೆ. ಇನ್ನೂ 600 ಕೋಟಿ ರೂಪಾಯಿ ತೆರಿಗೆ ಬಿಬಿಎಂಪಿಗೆ ಪಾವತಿಯಾಗಬೇಕಿದೆ. ಇದರ ಜವಾಬ್ದಾರಿ ವಹಿಸಿಕೊಳ್ಳುವುದು ಯಾರು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬಿಎಂಟಿಸಿ, ಬಿಎಂಆರ್ ಸಿಎಲ್, ಸರ್ಕಾರಿ ಸಹಯೋಗದ ಕಂಪನಿ, ನಿಗಮಗಳು ತೆರಿಗೆಯನ್ನು ಕಟ್ಟಿಲ್ಲ. ಪ್ರತಿಷ್ಠಿತ ಕಾಂಟ್ರಾಕ್ಟರ್ಸ್‌ಗಳಾದ ಡಿಎಸ್ ಮ್ಯಾಕ್ಸ್, ಎಂಬೆಸ್ಸಿ ತೆರಿಗೆ ಕಟ್ಟಿಲ್ಲ, ಶಿಕ್ಷಣ ಸಂಸ್ಥೆಗಳಾದ ಕೆಪಿಜಿ, ಒಎಸ್‌ಯು ಕೂಡ ತೆರಿಗೆ ಕಟ್ಟಿಲ್ಲ. ವಿಧಾನಸಭಾ ಸದಸ್ಯರ ಕುಟುಂಬಸ್ಥರು ಕೂಡ ತೆರಿಗೆ ಕಟ್ಟಿಲ್ಲ. ಇಂತಹ ದೊಡ್ಡ ದೊಡ್ಡವರ ತೆರಿಗೆ ಉಳಿಸಲು ಸ್ಕೀಂ ತರಲು ಮುಂದಾಗಿದ್ದಾರೆ.
ಕರ ನಿರಾಕರಣೆ ಚಳವಳಿ ಎಚ್ಚರಿಕೆ
ಮೇವರಿಕ್ ಹೋಲ್ಡಿಂಗ್ಸ್ 60 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಕೂಡ ಡಿಕೆ ಶಿವಕುಮಾರ್ ಅವರಿಗೆ ಬಿಡಿಎ ಕಾಂಪ್ಲೆಕ್ಸ್ ಅನ್ನು ಕಟ್ಟಲು ಅನುಮತಿ ಕೊಟ್ಟಿದ್ದಾರೆ. ನೀವೇನಾದರೂ ಬಾಕಿ ಇರುವ ತೆರಿಗೆ ವಸೂಲಿ ಮಾಡದೇ ಇದ್ದರೆ ಅಥವಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳದೆ ಇದ್ದರೆ, ಆಮ್ ಆದ್ಮಿ ಪಾರ್ಟಿ ವತಿಯಿಂದ ಕರ ನಿರಾಕರಣೆ ಚಳವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಎಎಪಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಜಗದೀಶ್ ಬಾಬು, ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಹಾಗೂ ಬೆಂಗಳೂರು ಮಹಿಳಾ ಘಟಕದ ಮುಖಂಡರಾದ ಅಂಜನಾ ಗೌಡ ಉಪಸ್ಥಿತರಿದ್ದರು.












Click it and Unblock the Notifications