ಕಾಂಗ್ರೆಸ್ ಶಾಸಕ ಹ್ಯಾರಿಸ್ ಬಂಧನಕ್ಕೆ ಆಪ್ ಆಗ್ರಹ, ಕಾರಣವೇನು?
ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆಮ್ ಆದ್ಮಿ ಪಕ್ಷವು ಹ್ಯಾರಿಸ್ ವಿರುದ್ಧ ಆರೋಪ ಮಾಡಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದೆ. ದೊಮ್ಮಲೂರು ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷದ ಸ್ಥಳೀಯ ಮುಖಂಡ ಶಿವಕುಮಾರ್ ನಾಯ್ಡು ಅವರ ಮೇಲೆ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಸ್ಥಳೀಯ ಮಾಜಿ ಕಾರ್ಪೊರೇಟರ್ ಶ್ರೀನಿವಾಸ್ ರೆಡ್ಡಿ ಹಾಗೂ ಇನ್ನಿತರ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆಪ್ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಇಂದು ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಶಾಸಕರ ವಾರ್ಡ್ ಭೇಟಿ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಶಿವಕುಮಾರ್ ನಾಯ್ಡು ಅವರ ಮೇಲೆ ಏಕಾಏಕಿ ಸ್ವತಃ ಶಾಸಕರೇ ಈ ರೀತಿಯ ಹಲ್ಲೆಗೆ ಮುಂದಾಗಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಶಾಸಕ ಹ್ಯಾರಿಸ್ ಹಾಗು ತಮ್ಮ ಮಗನ ಗೂಂಡಾ ವರ್ತನೆಗಳ ಮೂಲಕ ಶಾಂತಿನಗರ ರಿಪಬ್ಲಿಕ್ ಮಾಡಲು ನಮ್ಮ ಪಕ್ಷ ಎಂದಿಗೂ ಬಿಡುವುದಿಲ್ಲ. ಈಗಾಗಲೇ ಈ ಗೂಂಡಾ ಶಾಸಕರ ವಿರುದ್ಧ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಸೀತಾರಾಮ ಗುಂಡಪ್ಪ ಹೇಳಿದ್ದಾರೆ.

ಇತ್ತೀಚೆಗೆ ಬ್ರಿಗೇಡ್ ರಸ್ತೆಯಲ್ಲಿ ಬಿಬಿಎಂಪಿ ಫುಟ್‌ಪಾತ್ ಅನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಬಿಲ್ಡರ್‌ವೊಬ್ಬರ ಹಗರಣವನ್ನು ನಮ್ಮ ಪಕ್ಷದ ಮುಖಂಡ ಶಿವಕುಮಾರ್ ನಾಯ್ಡು ಬಯಲಿಗೆಳೆದಿದ್ದರು. ಶಿವಕುಮಾರ್ ನಾಯ್ಡು ಈ ರೀತಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಶಾಸಕರ ಹಾಗೂ ಅವರ ಗೂಂಡಾಗಳು ಕಳೆದ ಹಲವು ದಿನಗಳಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿ ಪಕ್ಷವನ್ನು ಬೆಳೆಸುತ್ತಿದ್ದ ಶಿವಕುಮಾರ್ ನಾಯ್ಡು ಅವರ ಮೇಲೆ ಸಾಕಷ್ಟು ಒತ್ತಡ ಹಾಗೂ ಬೆದರಿಕೆಯನ್ನು ಹಾಕುತ್ತಿದ್ದರು ಎಂದು ಆಪ್ ಪಕ್ಷದ ಬೆಂಗಳೂರು ನಗರದ ಅಧ್ಯಕ್ಷ ಡಾ.ಸತೀಶ್ ಕುಮಾರ್ ದೂರಿದ್ದಾರೆ.
ಈಗ ಶಾಸಕರೇ ನೇರವಾಗಿ ಹಲ್ಲೆ ನಡೆಸಿರುವುದು ಶಾಂತಿಪ್ರಿಯ ಶಾಂತಿನಗರ ಮತದಾರರಿಗೆ ಮಾಡಿರುವ ದ್ರೋಹ. ಈ ದುರ್ಘಟನೆ ನಡೆದು 20 ಗಂಟೆಗಳಾದರೂ ಪೊಲೀಸರು ಯಾವುದೇ ಎಫ್‌ಐಆರ್ ಹಾಕಿಲ್ಲ. ಶಾಸಕ ಹ್ಯಾರಿಸ್ ತೀವ್ರ ಒತ್ತಡವನ್ನು ಹಾಕುತ್ತಿದ್ದು, ಈ ಬಗ್ಗೆ ಪೊಲೀಸ್ ಆಯುಕ್ತರ ಬಳಿಯೂ ಸಹ ದೂರನ್ನು ಸಲ್ಲಿಸಿದ್ದೇವೆ. ಶಾಸಕ ಹ್ಯಾರಿಸ್ ವಿರುದ್ಧ ಕೂಡಲೇ ದೂರನ್ನು ದಾಖಲಿಸಿಕೊಂಡು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಶಿವಕುಮಾರ್ ನಾಯ್ಡು ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಪಕ್ಷದ ಮುಖಂಡರುಗಳಾದ ಪ್ರಕಾಶ್ ನೆಡುಂಗದಿ, ಹರಿಹರನ್, ಜಗದೀಶ್ ಚಂದ್ರ, ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ದೇವರಸಂ ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications