ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನ: ಅಧಿಕಾರಿಗಳ ವಿವರಣೆ
ಬೆಂಗಳೂರು, ಮಾರ್ಚ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿಯ ಆವರಣದಲ್ಲಿರುವ ಕೌನ್ಸಿಲ್ ಕಟ್ಟಡದಲ್ಲೇ ಮಹಿಳೆಯೊಬ್ಬರು ಆತ್ಮಹತ್ಯಗೆ ಯತ್ನಿಸಿದ ಅಪರೂಪದ ಘಟನೆ ಗುರುವಾರ (ಮಾ.06) ದನಡೆಸಿದೆ. ಸರ್ಕಾರಿ ಕಟ್ಟಡದಲ್ಲಿ ಹಾಡಹಗಲೇ ಯತ್ನಿಸಿದ್ದಾರೆ. ಕೂಡಲೇ ಅವರನ್ನು ತಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರ ಬೇಡಿಕೆಗಳು ಹಾಗೂ ಘಟನೆ ಕುರಿತು ಬಿಬಿಎಂಪಿ ಹಲವು ಅಂಶಗಳನ್ನು ವಿವರಿಸಿದೆ.
ಬಿಬಿಎಂಪಿ ಗೋವಿಂದರಾಜ ನಗರದ ಎಂ.ಸಿ ಲೇಔಟ್ ನಲ್ಲಿರುವ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ವಿಜಯ ನಗರದ ನಿವಾಸಿಯಾದ ಶ್ರೀಮತಿ ಉಮಾ ಮಹೇಶ್ವರಿ ಎಂಬುವರು 16ನೇ ಆಗಸ್ಟ್ 2024 ರಂದು ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ನೀಡಿರುವ ಔಷಧಗಳಿಂದ ನನಗೆ ಸಮಸ್ಯೆಯಾಗಿದೆ. ಅದಕ್ಕಾಗಿ ಪರಿಹಾರ ನೀಡುತ್ತಿಲ್ಲ ಎಂದು ಇಂದು ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ಕೌನ್ಸಿಲ್ ಸಭಾಂಗಣದ ಮೇಲೆ ಹತ್ತಿ ಕೆಳಗೆ ಬೀಳಲು ಯತ್ನಿಸಿದ್ದಾರೆ. ಹಣಕ್ಕಾಗಿ ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಆತ್ಮಹತ್ಯೆ ಪ್ರಯತ್ನ ಏಕೆ?: ಬಿಬಿಎಂಪಿ ಸ್ಪಷ್ಟನೆ ಏನು?
ನಗರದ ಎಂ.ಸಿ ಲೇಔಟ್ ನಲ್ಲಿರುವ ಆಸ್ಪತ್ರೆಗೆ ಕಳೆದ ವರ್ಷ 16ನೇ ಆಗಸ್ಟ್ 2024 ರಂದು ತಲೆನೋವು, ಮೈಕೈ ನೋವು ಎಂದು ಚಿಕಿತ್ಸೆಗೆ ತೆರಳಿದ್ದಾಗ, ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ. ಅದಾದ ಬಳಿಕ 8 ದಿನಗಳ ನಂತರ 24ನೇ ಆಗಸ್ಟ್ 2024 ಮತ್ತೆ ಸದರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿರುತ್ತಾರೆ. ಆಗಲೂ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿದ್ದಾರೆ.
ಅದಾದ ಬಳಿಕ ವಿಕ್ಟೋರಿಯಾ, ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೇಲ್ನೋಟಕ್ಕೆ ಆ ಮಹಿಳೆಯು ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಕಂಡು ಬಂದಿದೆ. ಚಿಕಿತ್ಸೆಯ ಬಳಿಕ ಹಲವು ಬಾರಿ ಸರ್ಕಾರಿ ಕಛೇರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಳಿ ತೆರಳಿ ಪರಿಹಾರ ನೀಡುವಂತೆ ಒತ್ತಾಯಿಸಿರುತ್ತಾರೆ. ಜೀವನಾಂಶ ನೀಡುವವರೆಗೂ ತೆರಳುವುದಿಲ್ಲ ಹಾಗೂ ಓಲಾ ಚಾರ್ಜ್ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಹಣ ನೀಡಲು ಮಹಿಳೆ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಶ್ರೀಮತಿ ಉಮಾ ಮಹೇಶ್ವರಿ ರವರಿಗೆ ಎಂ.ಸಿ ಲೇಔಟ್ ನಲ್ಲಿ ಚಿಕಿತ್ಸೆ ನೀಡಿರುವ ವಿಚಾರವಾಗಿ ವೈದ್ಯಕೀಯ ತನಿಕಾ ತಂಡವು ಈಗಾಗಲೇ ಪ್ರಥಮ ವಿಚಾರಣೆ ನಡೆಸಿದ್ದಾರೆ. ಇದರಿಂದ ಯಾವುದೇ ಲೋಪವಾಗಿರುವುದಿಲ್ಲ ಎಂದು ವರದಿ ನೀಡಿದ್ದಾರೆ. ಈ ಪ್ರಕರಣಕ್ಕೂ ಬಿಬಿಎಂಪಿಗೆ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.
ಸದರಿ ವಿಚಾರವಾಗಿ, ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮತ್ತೊಂದು ಸುತ್ತಿನ ತನಿಖೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ಆದ ಡಾ. ನಿರ್ಮಲಾ ಬುಗ್ಗಿ ಅವರು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಹಿಳೆ ಯಾವೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದಕ್ಕೆ ಎಷ್ಟೆಲ್ಲ ಖರ್ಚು ಆಗಿದೆ ಎಂದು ಇಂತಿಷ್ಟು ಹಣ ನೀಡುವಂತೆ ಕಾಗದಲ್ಲಿ ಬರೆದಿದ್ದಾರೆ. ಅದನ್ನು ವಿವರಣೆಯಲ್ಲಿ ಬಿಬಿಎಂಪಿ ಲಗತ್ತಿಸಿದೆ...












Click it and Unblock the Notifications