ಬೆಂಗಳೂರಿನ ಪ್ರಮುಖ ಯೋಜನೆಗೆ 2,410 ಎಕರೆ ಭೂಮಿ ಸ್ವಾಧೀನ: ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ
Bengaluru Business Corridor: ಬೆಂಗಳೂರಿನ ಪ್ರಮುಖ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಭರ್ಜರಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ. ಬೆಂಗಳೂರು ಅಭಿವೃದ್ಧಿಯ ಶರವೇಗದಲ್ಲಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಹಲವು ಪ್ರಮುಖ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಇದೀಗ ಬೆಂಗಳೂರಿನ ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಸಂಬಂಧಿಸಿದಂತೆ ಬರೋಬ್ಬರಿ 2,410 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಮುಂದಾಗಿದೆ. ಈ ಯೋಜನೆಯು ಇದೀಗ ವೇಗ ಪಡೆದುಕೊಂಡಿದ್ದು ಸಹಜವಾಗಿಯೇ ಈ ಯೋಜನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ.
ಬೆಂಗಳೂರಿನ ಬ್ಯುಸಿನೆಸ್ ಕಾರಿಡಾರ್ ಯೋಜನೆಯು 2026ರ ಜನವರಿ ಅಂತ್ಯದೊಳಗೆ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲು ತಯಾರಿ ನಡೆದಿದೆ ಎಂದು ವರದಿಯಾಗಿದೆ. ಇನ್ನು ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. 1ನೇ ಹಂತದಲ್ಲಿ73 ಕಿ.ಮೀ. ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪಿಆರ್‌ಆರ್-1) ನಿರ್ಮಾಣಕ್ಕೆ ಸಂಬಂಧಿಸಿದಂತೆ ಭರ್ಜರಿ ತಯಾರಿ ನಡೆದಿದೆ. ಕಾರಿಡಾರ್ ನಿರ್ಮಾಣಕ್ಕಾಗಿಯೇ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಲಿಮಿಟೆಡ್ ಸ್ಥಾಪಿಸಲಾಗಿದೆ.

ಈ ಉದ್ದೇಶಿತ ಯೋಜನೆಯು ಭೂಸ್ವಾಧಿನ ಸೇರಿದಂತೆ ವಿವಿಧ ಕಾರಣಗಳಿಗೆ ಕಗ್ಗಂಟಾಗಿ ಉಳಿದಿತ್ತು. ಇದೀಗ ಭೂಸ್ವಾಧೀನ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆರಂಭದಲ್ಲಿ 100 ಮೀಟರ್ ಅಗಲದ ಕಾರಿಡಾರ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿತ್ತಾದರೂ ಇದರಲ್ಲಿ ಇದೀಗ ಕೆಲವೊಂದು ಮಾರ್ಪಾಡುಗಳನ್ನು ಸಹ ಮಾಡಿಕೊಳ್ಳಲಾಗಿದೆ. 100 ಮೀಟರ್‌ನಿಂದ 65 ಮೀಟರ್‌ಗೆ ತಗ್ಗಿಸಲಾಗಿದೆ. 35 ಮೀಟರ್‌ನಲ್ಲಿ ವಾಣಿಜ್ಯ ಕಾರಿಡಾರ್ ನಿರ್ಮಾಣವಾಗಲಿದ್ದು. ಮುಖ್ಯರಸ್ತೆ ಜತೆಗೆ ಎರಡೂ ಬದಿಯಲ್ಲಿ ಸವೀರ್‍ಸ್ ರಸ್ತೆ, ದ್ವಿಚಕ್ರ ವಾಹನ ಪಥ, ಮೆಟ್ರೊ ಮಾರ್ಗ ನಿರ್ಮಾಣಕ್ಕೂ ಜಾಗ ಸಹ ಇರಲಿದೆ.
2,410 ಎಕರೆ ಭೂಮಿಯನ್ನು ಸ್ವಾಧೀನ
ಇನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ 2,410 ಎಕರೆ ಭೂಮಿ ಅವಶ್ಯಕತೆ ಇದೆ ಎಂದು ಹೇಳಲಾಗಿದ್ದು. ಇದಕ್ಕೆ ಭೂಸ್ವಾಧೀನ ಪ್ರಕ್ರಿಯೆ ಭರ್ಜರಿಯಾಗಿ ನಡೆದಿದೆ. ಯೋಜನೆಗೆ ಭೂಮಿ ಬಿಟ್ಟುಕೊಡುವ ಮಾಲೀಕರಿಗೆ ಪರಿಹಾರಕ್ಕೆ ಸಂಬಂಧಿಸಿದಂತೆ ಐದು ಆಯ್ಕೆಗಳನ್ನು ಸರ್ಕಾರದಿಂದ ಕೊಡಲಾಗಿದೆ. ಸದ್ಯ 800 ಎಕರೆಯು ಸ್ವಾಧೀನಕ್ಕೆ ಸಿದ್ಧವಾಗಿದೆ. ಈ ತಿಂಗಳಲ್ಲೇ ಅಂತಿಮ ಅವಾರ್ಡ್ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳ: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಯು ಹಲವು ವರ್ಷಗಳ ಕನಸಿನ ಯೋಜನೆಯಾಗಿದೆ. ಹಲವು ಕಾರಣಗಳಿಗೆ ಈ ಯೋಜನೆಯು ಕಗ್ಗಂಟಾಗಿ ಉಳಿದಿದೆ. ಇದೀಗ ಈ ಯೋಜನೆಗೆ ಭೂಮಿ ನೀಡುವ ರೈತರ ಮನವೊಲಿಸುವಲ್ಲಿ ಸರ್ಕಾರ ಅಲ್ಪ ಪ್ರಮಾಣದಲ್ಲಿ ಯಶಸ್ವಿಯಾಗಿದೆ.
ಯೋಜನೆ ವೇಗ ಪಡೆದುಕೊಂಡ ಬೆನ್ನಲ್ಲೇ ವಿವಿಧ ಭಾಗಗಳಲ್ಲಿ ಭೂಮಿ ಬೆಲೆಯೂ ಸಹ ಹೆಚ್ಚಳವಾಗುತ್ತಿದೆ. ಈ ಕಾರಿಡಾರ್ ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಹಾಗೂ ಹೊಸೂರು ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳನ್ನು ಸಹ ಸಂಪರ್ಕಿಸಲಿರುವುದು ಈ ಯೋಜನೆಯ ಪ್ಲಸ್ ಪಾಯಿಂಟ್ ಆಗಿದೆ.












Click it and Unblock the Notifications