ಬೆಳಗಾವಿಯಲ್ಲಿ ಸೆ.17ರಂದು ವಿಶ್ವಕರ್ಮ ಜಯಂತಿ
ಬೆಳಗಾವಿ, ಜು. 11 : ಗಡಿನಾಡು ಬೆಳಗಾವಿಯಲ್ಲಿ ಈ ಬಾರಿಯ ವಿಶ್ವಕರ್ಮ ಜಯಂತಿಯನ್ನು ಸೆ.17ರಂದು ಆಚರಿಸಲಾಗುತ್ತದೆ ಎಂದು ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಡಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವಿಧ ಪಕ್ಷದ ಮುಖಂಡರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಸೆ. 17ರ ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಸರ್ದಾರ್ ಮೈದಾನದಿಂದ ಪಿ.ಬಿ.ರಸ್ತೆಯವರೆಗೆ ಹಾಗೂ ಇತರೆ ಪ್ರಮುಖ ಬೀದಿಗಳಲ್ಲಿ 250 ಕೆ.ಜಿ ತೂಕದ ಪಂಚಲೋಹ ವಿಶ್ವಕರ್ಮ ಪುತ್ಥಳಿಯ ಮೆರವಣಿಗೆ ನಡೆಯಲಿದೆ ಎಂದರು.

ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಪಕ್ಷಾತೀತವಾಗಿ ಎಲ್ಲಾ ನಾಯಕರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಕೆ.ಪಿ.ನಂಜುಡಿ ಹೇಳಿದರು. ಸುಮಾರು 2-3 ಲಕ್ಷ ಜನರು ಕಾರ್ಯಕ್ರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. [ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವೆಬ್ ಸೈಟ್]
ಸರ್ಕಾರಕ್ಕೆ ಮನವಿ : ಸಮಾವೇಶದಲ್ಲಿ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು, ವಿಶ್ವಕರ್ಮ ಜಯಂತಿ ಅಂಗವಾಗಿ ಸೆ.17ರಂದು ಸರ್ಕಾರಿ ರಜೆ ಘೋಷಿಸಬೇಕು, ಚಿನ್ನ-ಬೆಳ್ಳಿ ಕೆಲಸಗಾರರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಯಬೇಕು, ಸಮಾಜಕ್ಕೆ ರಾಜಕೀಯ ಶಕ್ತಿ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ನಾಡಿಗೆ ವಿಶ್ವಕರ್ಮ ಸಮುದಾಯ ಹಲವಾರು ಕೊಡುಗೆಗಳನ್ನು ನೀಡಿದೆ. ಆದರೆ, ವಿಶ್ವಕರ್ಮ ಸಮಾಜಕ್ಕೆ ದೊರೆಯಬೇಕಾದ ಗೌರವ ಹಾಗೂ ರಾಜಕೀಯ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಸಮುದಾಯಕ್ಕೆ ದೊರೆಯಬೇಕಾದ ಸೌಲಭ್ಯ, ಗೌರವ, ರಾಜಕೀಯ ಪ್ರಾತಿನಿಧ್ಯ ಸಿಗುವವರೆಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.












Click it and Unblock the Notifications