ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್‌ಗೆ ಕೋವಿಡ್ ಸೋಂಕು
ಬೆಳಗಾವಿ, ಅಕ್ಟೋಬರ್ 02 : ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲಗೆ ಕೋವಿಡ್ ಸೋಂಕು ತಗುಲಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಚಿವ ಶ್ರೀಮಂತ ಪಾಟೀಲ ಅವರು ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಗುರುವಾರ ಸಂಜೆ ಸಚಿವರ ಕೋವಿಡ್ ಪರೀಕ್ಷೆ ಫಲಿಶಾಂಶ ಬಂದಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ.
"ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ, ನಿಮ್ಮ ಸೇವೆಗೆ ಮರಳುತ್ತೇನೆ" ಎಂದು ಸಚಿವರು ಟ್ವೀಟ್ ಮಾಡಿದ್ದರು.

ಕಳೆದ ವಾರ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಸಚಿವರು ಪಾಲ್ಗೊಂಡಿದ್ದರು. ಅಧಿವೇಶನ ಮುಗಿಸಿ ಕ್ಷೇತ್ರಕ್ಕೆ ವಾಪಸ್ ಹೋದ ಬಳಿಕ ಸಚಿವರು ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಅನೇಕ ಶಾಸಕರಿಗೆ ಕೋವಿಡ್ ಸೋಂಕು ಇರುವುದು ಖಚಿತವಾಗಿದೆ.
ಸಚಿವರಾದ ಜಗದೀಶ್ ಶೆಟ್ಟರ್, ನಾರಾಯಣ ಗೌಡ, ಬಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ ಸೇರಿದಂತೆ ವಿವಿಧ ನಾಯಕರು ಸಚಿವ ಶ್ರೀಮಂತ ಪಾಟೀಲ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ.
ಇಂದು ನಾನು ಕೋವಿಡ್ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ, ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ.
— Shrimant Patil BJP (@ShrimantPatil2) October 1, 2020
ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಆದಷ್ಟು ಬೇಗ ಗುಣಮುಖನಾಗಿ, ನಿಮ್ಮ ಸೇವೆಗೆ ಮರಳುತ್ತೇನೆ. pic.twitter.com/edW4jkYXfL
ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಬೆಳಗಾವಿಯಲ್ಲಿ 115 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 19,572ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳು 2,216.












Click it and Unblock the Notifications