ತಾಕತ್ತಿದ್ದರೆ ದಾಖಲೆ ಬಿಡುಗಡೆ ಮಾಡಿ: ಸಚಿವ ಭೈರತಿ ಸುರೇಶಗೆ ಶೋಭಾ ಕರಂದ್ಲಾಜೆ ಚಾಲೆಂಜ್
ಬೆಳಗಾವಿ, ಅಕ್ಟೋಬರ್ 27: ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಗುಡುಗಿದ್ದ ಸಚಿವ ಭೈರತಿ ಸುರೇಶ್ ಅವರಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ನೇರವಾಗಿ ಚಾಲೆಂಜ್ ಮಾಡಿದ್ದಾರೆ. ಸದ್ಯ ನನ್ನ ಮೇಲೆ ಅವರು ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಭಾನುವಾರ ಬೆಳಗಾವಿ ಅಶೋಕ ನಗರದಲ್ಲಿರುವ ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವ ಶೋಭಾ ಕರಂದ್ಲಾಜೆ ಅವರು, ಸಚಿವ ಬೈರತಿ ಸುರೇಶ್ ಅವರು ನೂರಾರು ಮುಡಾ ಕಡತಗಳನ್ನು ಸುಟ್ಟು ಹಾಕಿದ್ದ ವಿರುದ್ಧ ನಾನು ಧ್ವನಿ ಎತ್ತಿದ್ದೆ. ಹೀಗಾಗಿ ಅವರು ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ಸಚಿವೆ ಸವಾಲು ಹಾಕಿದ್ದಾರೆ.

ಇದಷ್ಟೇ ಅಲ್ಲದೇ ನನ್ನ ಮೇಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಹಲವಾರು ಸರ್ಕಾರದ ಸಚಿವರು ಭ್ರಷ್ಟಾಚಾರದ ತನಿಖೆ ಎದುರಿಸಿದ್ದಾರೆ. ಶೋಭಾ ಕರಂದ್ಲಾಜೆ ಯಾವತ್ತಿಗೂ ಭ್ರಷ್ಟಾಚಾರ ಮಾಡಿಲ್ಲ, ಮಾಡುವುದಿಲ್ಲ ಮತ್ತು ಬಿಜೆಪಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿಭಾಯಿಸಿದವಳು ನಾನು ಎಂದು ಅವರು ಉತ್ತರಿಸಿದ್ದಾರೆ.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೂ ವಿದ್ಯುತ್ ಇಲಾಖೆಗೂ ಏನು ಸಂಬಂಧ? ಏನು ಮಾಡಲು ಹೊರಟ್ಟಿದ್ದೀರಿ? ನಕಲಿ ದಾಖಲೆ ಸೃಷ್ಟಿಸಲು ಪೊನ್ನಣ್ಣನಿಗೆ ಜವಾಬ್ದಾರಿ ನೀಡಿದ್ದೀರಾ ? ಪೊನ್ನಣ್ಣ ಅವರು ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿದ್ದಾರೆ. ಅವರಿಗೆ ನೀವು ವಿದ್ಯುತ್ ಇಲಾಖೆಯ ಜವಾಬ್ದಾರಿ ನೋಡಿ ಎಂದರೆ ಅದರಲ್ಲಿಯೂ ಭ್ರಷ್ಟಾಚಾರ ಮಾಡಲು ಹೋರಟ್ಟಿದೀರಿ ಎನ್ನುವ ಸಂಶಯ ಕಾಡುತ್ತಿದೆ ಎಂದು ತಿಳಿಸಿದರು.
ತಾಕುತ್ತು ಇದ್ದರೆ ದಾಖಲೆ ಬಹಿರಂಗಪಡಿಸಿ
ನನ್ನ ಮೇಲಿನ ಆರೋಪ ಕುರಿತು ನಿಮ್ಮಲ್ಲಿ ಯಾವ ದಾಖಲಾತಿ ಇದೆ ತಕ್ಷಣ ಬಹಿರಂಗ ಪಡಿಸಿ ಎಂದು ಅವರು ಪುನರುಚ್ಚರಿಸಿದರು.
ಸಚಿವ ಬೈರತಿ ಸುರೇಶ್ ಮುಡಾ ದಾಖಲೆ ಸುಟ್ಟು ಹಾಕಿದ್ದು ಸತ್ಯ. ಅದಕ್ಕಾಗಿ ಈಗ ಜಾರಿ ನಿರ್ದೇಶನಾಲಯ, ಲೋಕಾಯುಕ್ತ ತನಿಖೆ ಆರಂಭಿಸಿದೆ. ಹಲವಾರು ಸಂಘ ಸಂಸ್ಥೆಗಳು ಸರಕಾರದ ಮೇಲೆ ಕಣ್ಣಿಟ್ಟಿದ್ದಾರೆ. ನಿಮಗೆ ತಾಕತ್ತು ಇದ್ದರೆ ನನ್ನ ಭ್ರಷ್ಟಾಚಾರ ಬಹಿರಂಗ ಮಾಡಿ ಎಂದರು.
ಇನ್ನೂ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ಕುರಿತು ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವೆಯಲ್ಲಿ ಶಿವಸೇನೆ, ಬಿಜೆಪಿಯ NDA ಮೈತ್ರಿಕೂಟ ಗೆಲವು ಸಾಧಿಸಲಿದೆ ಎಂದು ಅವರು ಹೇಳಿದರು.
ಬೆಳಗಾವಿಯಲ್ಲಿವೆ ಅತ್ಯಧಿಕ ಕಾರ್ಮಿಕರ ಕಾರ್ಡ್
ರಾಜಧಾನಿ ಬೆಂಗಳೂರಿನ ಬಳಿಕ ಹೆಚ್ವು ಕಾರ್ಮಿಕರ ಕಾರ್ಡ್ ಹೊಂದಿರುವುದು ಬೆಳಗಾವಿ ನಗರ. ಬಹಳ ದೊಡ್ಡ ಕೈಗಾರಿಕಾ ಕಂಪನಿಗಳು ಇಲ್ಲಿವೆ. ಇಲ್ಲಿನ ಕೈಗಾರಿಕೆಯ ಕಂಪನಿಗಳು ಪುಣೆ ಹಾಗೂ ಮಹಾರಾಷ್ಟ್ರಕ್ಕೆ ವಸ್ತುಗಳನ್ನು ರವಾನಿಸುತ್ತಾರೆ. ಸುಮಾರು ಮೂರುವರೆ ಲಕ್ಷ ಕಾರ್ಮಿಕರು ಕಾರ್ಡ್ ಗಳು ಇಲ್ಲಿವೆ. ಆ ಎಲ್ಲ ಕಾರ್ಮಿಕರ ರಕ್ಷಣೆ ಇಲಾಖೆ ಕರ್ತವ್ಯವಾಗಿದೆ ಎಂದರು.
ಹೊಸ ESIಆಸ್ಪತ್ರೆ ನಿರ್ಮಾಣಕ್ಕೆ ಟೆಂಡರ್
ಬೆಳಗಾವಿ ಅಶೋಕ ನಗರದಲ್ಲಿರುವ ಇಎಸ್ಐ ಆಸ್ಪತ್ರೆಗೆ ಶಿಥಿಲಾವಸ್ತೆಯಲ್ಲಿದೆ. ಹೊಸ ಕಟ್ಟಡ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ಬೆಳಗಾವಿಗೆ ಇರುವ ಈ ಆಸ್ಪತ್ರೆ 50 ಬೆಡ್ ಗಳನ್ನು ಹೊಂದಿದೆ. ಹೊಸ ಕಟ್ಟಡದಲ್ಲಿ 100 ಬೆಡ್ ಗಳ ವ್ಯವಸ್ಥೆ ಮಾಡಲು 152 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ಇಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದ ಎಂದು ಅವರು ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಶೋಭಾ ಕರಂದ್ಲಾಜೆ ಅವರು ಭ್ರಷ್ಟಾಚಾರ ಮಾಡಿದ್ದರು. ಅದರ ದಾಖಲಾತಿ ಸಂಗ್ರಹಿಸುವಂತೆ ಹೇಳಿದ್ದೇನೆ. ಮುಂದಿನ 15 ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದರು.












Click it and Unblock the Notifications