Karnataka Rain: ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದ ಜಲಾವೃತಗೊಂಡ ಸೇತುವೆ: ಜನಜೀವನ ಅಸ್ತವ್ಯಸ್ತ
ಬೆಳಗಾವಿ, ಸೆಪ್ಟೆಂಬರ್ 25: ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಆಯ್ತು ಎನ್ನುವಷ್ಟರಲ್ಲೇ ಮತ್ತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರ ಜೋರಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೂ ನಿರಂತರ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ನಿರಂತರ ಮಳೆಗೆ ಹಿರೇಬುದನೂರ ಗ್ರಾಮದಿಂದ ಚಿಕ್ಕಬುದನೂರ ಹೋಗುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಎರಡು ಗ್ರಾಮದ ಜನರಿಗೆ ಸಂಪರ್ಕಕ್ಕೆ ಒಂದೇ ಮಾರ್ಗವಾದ ಕಾರಣ ಜನರು ಜಲಾವೃತಗೊಂಡ ಸೇತುವೆಯಲ್ಲೇ ಚಲಿಸುವ ಹರಸಾಹಸಕ್ಕೆ ಮುಂದಾಗುತ್ತಿದ್ದಾರೆ. ಈ ವೇಳೆ ಅವಘಡವೊಂದು ನಡೆದಿದ್ದು, ಅದೃಷ್ಟವಶಾತ್ ಅಪಾಯಕ್ಕೆ ಸಿಲುಕಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಬುದನೂರ ಗ್ರಾಮದ ಬೀರಬಲ್ಲ ಡೊಳ್ಳಿ ಹಾಗೂ ನಿಂಗವ್ವ ದೇಗಾನಟ್ಟಿ ಎನ್ನುವವರು ಸಂಪೂರ್ಣ ಜಲಾವೃತಗೊಂಡ ಚಿಕ್ಕಬುದನೂರ ಹೋಗುವ ಸೇತುವೆಯಲ್ಲೇ ಅಪಾಯವನ್ನು ಲೆಕ್ಕಿಸದೇ ಬೈಕ್‌ನಲ್ಲಿ ಸೇತುವೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಇಬ್ಬರು ನೀರಿಗೆ ಬಿದ್ದಿದ್ದು, ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಸಹೋದರ, ಸಹೋದರಿಯನ್ನು ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಬೀರಬಲ್ಲ ಡೊಳ್ಳಿ ಹಾಗೂ ನಿಂಗವ್ವ ದೇಗಾನಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಭಾರೀ ಮಳೆಗೆ ಉಕ್ಕಿ ಹರಿದ ಹಳ್ಳ: ಪ್ರವಾಹ ನಡುವೆ ಸಿಲುಕಿದ ಶಾಲಾ ವಿದ್ಯಾರ್ಥಿಗಳು
ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ನವಲಗುಂದದಲ್ಲಿ ಹಳ್ಳ ಉಕ್ಕಿ ಹರಿದ ಪರಿಣಾಮ ಮಕ್ಕಳು ಶಾಲೆಯಲ್ಲೇ ಸಿಲುಕಿಕೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ-ಇಬ್ರಾಹಿಂಪುರ ನಡುವಿನ ಎಸ್.ಎಸ್. ಬಾಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ಶಾಲೆ ಎರಡು ಹಳ್ಳಗಳ ಮಧ್ಯೆಯಿದ್ದು, ಏಕಾಏಕಿ ನೀರು ನುಗ್ಗಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆವರಿಸಿಕೊಂಡಿದೆ.
ಶಾಲೆ ಮುಗಿದರೂ ವಿದ್ಯಾರ್ಥಿಗಳು ಮನೆಗೆ ತೆರಳಲಾರದೆ ಶಾಲೆಯಲ್ಲಿಯೇ ಉಳಿದುಕೊಂಡರು. ಎರಡು ಗಂಟೆಗಳ ಬಳಿಕ ಹಳ್ಳದ ನೀರು ಕಡಿಮೆಯಾಗದ ಕಾರಣ ಕೊನೆಗೆ ಸ್ಥಳೀಯರು ಟ್ರ್ಯಾಕ್ಟರ್ ಸಹಾಯದಿಂದ ಮಕ್ಕಳನ್ನು ಶಾಲೆಯಿಂದ ಕರೆತಂದಿದ್ದಾರೆ. ಏಕಾಏಕಿ ಮಳೆ ಸುರಿದ ಕಾರಣ ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಜನರು ಆತಂಕದಲ್ಲಿದ್ದಾರೆ.












Click it and Unblock the Notifications