Belagavi Cyber Crime: ಒಂದೇ ತಿಂಗಳಲ್ಲಿ 1 ಕೋಟಿ ರೂಪಾಯಿ ಮಂಗಮಾಯ
Belagavi Cyber Crime: ಬೆಳಗಾವಿ, ಫೆಬ್ರವರಿ 14: ಸೈಬರ್ ವಂಚಕರ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಕೂಡ ಜನರು ಮೋಸ ಹೋಗುವುದು ಮಾತ್ರ ಕಮ್ಮಿಯಾಗುತ್ತಿಲ್ಲ. ವಂಚಕರ ಮಾತನ್ನು ನಂಬುತ್ತಿರುವ ಜನರು ಕೋಟ್ಯಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇಂತಹದ್ದೇ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1.53 ಕೋಟಿ ರೂಪಾಯಿ ವಂಚಕರ ಪಾಲಾಗಿದೆ.
ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಹಾಗೂ ವರ್ಕ್ ಫ್ರಂ ಹೋಮ್ ಆಸೆ ತೋರಿಸಿ ಬೆಳಗಾವಿಯ ಉದ್ಯಮಿಗಳಿಗೆ ಸೈಬರ್ ವಂಚಕರು ಕೋಟ್ಯಂತರ ರೂಪಾಯಿ ವಂಚಿಸಿದ್ದು, ಬೆಳಗಾವಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಮೂರು ದೂರು ದಾಖಲಾಗಿದೆ.

ಪ್ರಕರಣ-1
ಗೋಕಾಕ್ ಮೂಲದ ಉದ್ಯಮಿ ಬಾಬುರಾವ್ ಅವರಿಗೆ ಟ್ರೇಡಿಂಗ್ ಮೇಲೆ ಆಸಕ್ತಿ ಬಂದಿದ್ದು, ಇದರಿಂದ ಒಳ್ಳೆಯ ಲಾಭ ಬರುತ್ತದೆ ಎಂದು ನಂಬಿಕೊಂಡಿದ್ದರು. ಹೀಗಾಗಿ ಬಾಬುರಾವ್ ಅವರು ಟ್ರೇಡಿಂಗ್ ಮಾಡುವವರ ಪರಿಚಯ ಮಾಡಿಕೊಳ್ಳಲು ಟೆಲಿಗ್ರಾಂ ಆ್ಯಪ್‌ನಲ್ಲಿ ಸರ್ಚ್ ಮಾಡಿದ್ದು, ಈ ವೇಳೆ ವಂಚಕರು ಪರಿಚಯವಾಗಿದ್ದಾರೆ. ವಂಚಕರು ನಯವಾದ ಮಾತುಗಳಿಂದ ಬಾಬುರಾವ್ ಅವರನ್ನು ನಂಬಿಸಿದ್ದು, ಬಾಬುರಾವ್ ಕೂಡ ವಂಚಕರು ಹೇಳಿದಂತೆ ನಡೆದುಕೊಂಡಿದ್ದಾರೆ.
ಮೊದಲು ಬಾಬುರಾವ್ ವಂಚಕರ ವಾಟ್ಸಪ್ ಗ್ರೂಪ್‌ಗೆ ಸೇರಿದ್ದಾರೆ. ವಂಚಕರ ಸಲಹೆಯಂತೆ ಉದ್ಯಮಿ ಬಾಬುರಾವ್ ಕೆಕೆಆರ್‌ಎಂಎಫ್ ವೆಬ್ಸೈಟ್‌ನಲ್ಲಿ ಪ್ರೊಫೈಲ್ ಕ್ರಿಯೆಟ್ ಮಾಡಿದ್ದಾರೆ. ನಂತರ ಇದರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ 27.50 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ವಂಚಕರು ಹಣ ಪಡೆದು ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ-2
ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಚಿದಾನಂದ್ ಸೋಶಿಯಲ್ ಮಿಡಿಯಾ ಮಾರ್ಕೆಟಿಂಗ್ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ಪಡೆಯಲು ಹೋಗಿ ಬರೋಬ್ಬರಿ 58.34 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ವಂಚಕರು ಮೊದಲು ಕೆಲಸ ಪಡೆಯಲು ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಇದಕ್ಕೂ ಮೊದಲು ವಂಚಕರು ಚಿದಾನಂದ್ ಅವರ ಕೆವಿಜಿ ಬ್ಯಾಂಕ್ ಅಕೌಂಟಿಗೆ 210ರೂ ಹಣ ಹಾಕಿದ್ದಾರೆ. ನಂತರ ಪ್ರೊಫೈಲ್ ಕ್ರಿಯೆಟ್ ಮಾಡಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತೆ ಎಂದು ವಂಚಕರು ಚಿದಾನಂದ್ ಅವರಿಗೆ ನಂಬಿಸಿದ್ದಾರೆ. ಅದರಂತೆ ಚಿದಾನಂದ್ ಒಂದು ಸಾವಿರ ಜಮಾ ಮಾಡಿದ್ದಾರೆ. ಬಳಿಕ ವಂಚಕರು ಚಿದಾನಂದ ಅವರಿಗೆ 1400 ರೂ ವಾಪಾಸ್ ನೀಡಿದ್ದಾರೆ. ಹೆಚ್ಚಿನ ಲಾಭದ ಆಸೆಗೆ ಚಿದಾನಂದ್ 58.34 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದು, ವಂಚಕರು ಹಣ ಪಡೆದು ಸಂಪರ್ಕಕ್ಕೆ ಸಿಗದೇ ಪರಾರಿಯಾಗಿದ್ದಾರೆ.
ಇಂತಹದ್ದೇ ಮತ್ತೊಂದು ಪ್ರಕರಣ ಸೇರಿದಂತೆ ಮೂವರು ಬೆಳಗಾವಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಿದಾನಂದ್ ಅವರಂತೆ ಶಿವಾನಂದ್ ಎನ್ನುವವರು ಕೂಡ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಮಾತನಾಡಿದ್ದು, ಒಂದೇ ದಿನದಲ್ಲಿ ಹೆಚ್ಚಿನ ಲಾಭ ಕೊಡಲು ಯಾವ ಕಂಪನಿಗಳಿಂದ ಸಾಧ್ಯವಿಲ್ಲ. ಸಾರ್ವಜನಿಕರು ಈ ಸಂಗತಿಯನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು. ಸೈಬರ್ ವಂಚಕರ ಮೂಲ, ನೆಲೆ ಕಂಡುಹಿಡಿಯುವುದು ಕಷ್ಟ, ಇಂಥ ಆಸೆ- ಆಮಿಷಗಳಿಗೆ ಜನ ಒಳಗಾಗಬಾರದು ಎಂದಿದ್ದಾರೆ.












Click it and Unblock the Notifications