BSY Vs Jagadish Shettar: ಜಗದೀಶ್ ಶೆಟ್ಟರ್ ಅವರನ್ನು ಮನೆಗೆ ಕಳಿಸ್ತೇನೆ: ಬಿಎಸ್‌ವೈ
ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್ ಅವರನ್ನು ಮನೆಗೆ ಕಳುಹಿಸಲು ಹೊರಟಿದ್ದೇನೆ ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ವಿರುದ್ಧ ಕಿಡಿ ಕಾರಿದರು.
ಸಿಎಂ ಹುದ್ದೆ ಸೇರಿದಂತೆ ಎಲ್ಲಾ ಸ್ಥಾನ ಮಾನಗಳನ್ನು ಕೊಟ್ಟ ಬಿಜೆಪಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಪಕ್ಷೇತರರಾಗಿ ಚುನಾವಣೆಗೆ ನಿಂತಿದ್ದರೆ ಕ್ಷಮಿಸಬಹುದಿತ್ತು, ಆದರೆ ಕಾಂಗ್ರೆಸ್ ಪಕ್ಷ ಸೇರಿದ್ದು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಜಗದೀಶ್ ಶೆಟ್ಟರ್ ಅವರನ್ನು ಮನೆಗೆ ಕಳುಹಿಸುವ ಗುರಿ ಹೊಂದಿದ್ದೇನೆ. ಇದಕ್ಕಾಗಿ ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅಲ್ಲದೆ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ನಿಂತಿರುವ ಲಕ್ಷ್ಮಣ ಸಂಗಪ್ಪ ಸವದಿಯನ್ನೂ ಮನೆಗೆ ಕಳುಹಿಸುವುದು ನಿಶ್ಚಿತ. ಸವದಿಯನ್ನು ಸೋಲಿಸಲು ಈ ಭಾಗದ ಜನ ತೀರ್ಮಾನಿಸಿದ್ದಾರೆ. ಅತಿ ಶೀಘ್ರದಲ್ಲೇ ಕಾಂಗ್ರೆಸ್ ಮುಕ್ತ ಭಾರತ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.
ಬಿಎಸ್‌ವೈ ವಿರುದ್ಧ ಘೋಷಣೆ ಕೂಗಿದ ಸವದಿ ಬೆಂಬಲಿಗರು
ಅಥಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಸವದಿ ವಿರುದ್ಧ ಕಿಡಿ ಕಾರಿದ ಬಿಎಸ್‌ವೈ ವಿರುದ್ಧವೇ ಕಾಂಗ್ರೆಸ್ ಕಾರ್ಯರ್ತರು ಘೋಷಣೆ ಕೂಗಿದರು. ಬಿಎಸ್ ಯಡಿಯೂರಪ್ಪ ಇನ್ನೂ ಎಷ್ಟು ಬಾರಿ ಬಂದರೂ ಇಲ್ಲಿ ಲಕ್ಷ್ಮಣ ಸವದಿ ಅವರು ಗೆಲ್ಲುವುದು ನಿಶ್ಚಿತವಾಗಿದೆ. ಮೋಸಗಾರ ಯಡಿಯೂರಪ್ಪ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿಗೆ ಟಿಕೆಟ್ ನಿರಾಕರಿಸಿ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಕೋಪಗೊಂಡ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಈಗಾಗಲೇ ಸವದಿ ಪರವಾಗಿ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಬಂಡಾಯ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದು, ಸೋಲಿಸುವ ಮೂಲಕ ಬುದ್ದಿ ಕಲಿಸಲು ಮುಂದಾಗಿದೆ.












Click it and Unblock the Notifications