ಬೆಳಗಾವಿ ಅಧಿವೇಶನ: 5 ಸಾವಿರ ಪೊಲೀಸ್ ಸಿಬ್ಬಂದಿ ವಾಸ್ತವ್ಯಕ್ಕೆ ಜರ್ಮನ್ ಐಷಾರಾಮಿ ಟೆಂಟ್
ಬೆಳಗಾವಿ, ನವೆಂಬರ್, 30: ಡಿಸೆಂಬರ್ 4ರಿಂದ 15ರವರೆಗೆ ಎರಡು ವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ವಿಧಾನಮಂಡಲ ಅಧಿವೇಶನದ ಭದ್ರತೆಗಾಗಿ 5ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್.ಎನ್.ಸಿದ್ರಾಮಪ್ಪ ಮಾಹಿತಿ ನೀಡಿದ್ದಾರೆ. ಈ ಬೃಹತ್ ಸಂಖ್ಯೆಯ ಪೊಲೀಸರ ವಾಸ್ತವ್ಯಕ್ಕೆ ನಾಲ್ಕು ದೊಡ್ಡ ಜರ್ಮನ್ ಶೈಲಿಯ ಟೆಂಟ್‌ನೊಂದಿಗೆ ಬೃಹತ್ ಟೌನ್ ಶಿಪ್ ಅನ್ನೇ ನಿರ್ಮಿಸಲಾಗಿದೆ.
ಎರಡು ಕೋಟಿ ರೂಪಾಯಿ ವೆಚ್ಚದ ಟೌನ್ ಶಿಪ್
ಅಧಿವೇಶನ ಬಂದೋಬಸ್ತ್‌ಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಬರುವ ಪೊಲೀಸ್ ಸಿಬ್ಬಂದಿಗೆ ಬೃಹತ್ ಟೌನ್ ಶೀಪ್ ನಿರ್ಮಿಸಿ ವಾಸ್ತವ್ಯಕ್ಕೆ ಸುವರ್ಣ ವಿಧಾನ ಸೌಧದ ಅಲಾರವಾಡ ಬಳಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಲಾಗಿದೆ. ಈ ಟೌನ್ ಶಿಪ್ ನಿರ್ಮಾಣ ಕೆಲಸವನ್ನು ಮೈಸೂರಿನ ಕೆ.ಎಂ ಶರೀಫ್ ಎನ್ನುವರು ತೆಗೆದುಕೊಂಡಿದ್ದು, ಹದಿಮೂರು ದಿನಗಳಿಂದ 100 ಜನ ಕಾರ್ಮಿಕರು ಈ ಟೆಂಟ್ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದೀಗ ಬಹುತೇಕ ಮುಗಿದಿದ್ದು, ಕೊನೆಯ ಹಂತದ ಕೆಲಸಗಳನ್ನು ಮಾಡುತ್ತಿದ್ದಾರೆ.

ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ಹಾಕಿ, ಒಂದು ಚಿಕ್ಕ ಟೆಂಟ್ ಹಾಕಿ ಟೌನ್ ಶಿಪ್ ನಿರ್ಮಾಣ ಮಾಡಲಾಗಿದ್ದು, ಒಂದು ಜರ್ಮನ್ ಟೆಂಟ್ 100 ಅಡಿ ಅಗಲ, 200 ಅಡಿ ಉದ್ದ ಇರಲಿದೆ. ಇದೇ ಮಾದರಿಯ ಒಟ್ಟು ನಾಲ್ಕು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಸಣ್ಣ ಟೆಂಟ್ ಸಹ ನಿರ್ಮಿಸಲಾಗಿದೆ. ಇನ್ನು ಒಂದೊಂದು ಟೌನ್ ಶಿಪ್‌ನಲ್ಲಿ 500 ಜನ ಸಿಬ್ಬಂದಿಗೆ ಮಲಗಲು ವ್ಯವಸ್ಥೆ ಮಾಡಲಾಗಿದೆ.
ವಾಟರ್ ಪ್ರೂಫ್ ಟೆಂಟ್ ಇದಾಗಿದ್ದು, ಒಟ್ಟು 2,000 ಜನ ಪೊಲೀಸ್ ಸಿಬ್ಬಂದಿಗೆ ಇಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಂಚ, ಗಾದೆ, ತಲೆ ದಿಂಬು, ಬೆಡ್ ಶೀಟ್ ನೀಡಲಾಗುತ್ತದೆ. ಹಾಗೆಯೇ ಚಾರ್ಜಿಂಗ್ ವ್ಯವಸ್ಥೆ ಕೂಡ ಇದೆ. ಒಟ್ಟು ಎಂದಿನ ವರ್ಷದಂತೆ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಈ ಬಾರಿ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.
ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ ಜಾರಿ
ಬೆಳಗಾವಿ, ನವೆಂಬರ್, 30: ತಾಲೂಕಿನ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತತೆ ಕಾಪಾಡುವ ಹಿತದೃಷ್ಟಿಯಿಂದ ಸುವರ್ಣಸೌಧದ ಸುತ್ತಲಿನ ಪ್ರದೇಶದಲ್ಲಿ ಡಿಸೆಂಬರ್ 1ರಿಂದ 30ರವರೆಗೆ 144 ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಸೌಧದ ಪೂರ್ವ ಕಡೆಗೆ ಶೆಗನಮಟ್ಟಿ ಜಮೀನ 500 ಮೀಟರ್ ಅಂತರ, ಉತ್ತರಕ್ಕೆ ಸುವರ್ಣ ಗಾರ್ಡನ್ ಕಲ್ಯಾಣ ಮಂಟಪದವರೆಗೆ 500 ಮೀಟರ್ ಹಾಗೂ ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿಯ ಆಚೆಗೆ ಇರುವ ಸಂಪೂರ್ಣ ಗಾರ್ಡನ್ ಹೊಟೇಲ್‍ದವರೆಗೆ 500 ಮೀಟರ್ ಅಂತರ ಮತ್ತು ದಕ್ಷಿಣ ದಿಕ್ಕಿನ ಕಡೆಗೆ ಟೊಯೊಟಾ ಶೋರೂಂವರೆಗೆ 500 ಮೀಟರ್ ಅಂತರದಲ್ಲಿ ಡಿಸೆಂಬರ್ 1ರಿಂದ 30ರವರೆಗೆ ಈ ನಿಷೇಧಾಜ್ಞೆ ಜಾರಿ ಇರಲಿದೆ.
5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಅಪಾಯ ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲುಗಳನ್ನು, ಕ್ಷಾರಪದಾರ್ಥ, ಪಟಾಕಿ ಇಲ್ಲವೆ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ. ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಭಾಷಣ, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಪ್ರತಿಬಂಧಿಸಲಾಗಿದೆ.
ಯಾವುದೇ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.












Click it and Unblock the Notifications