ವಯಸ್ಸಾಯ್ತು, ಇನ್ಮುಂದೆ ಚುನಾವಣೆ ಸ್ಪರ್ಧಿಸುವುದಿಲ್ಲ: ದೇವೇಗೌಡ
ಬೆಂಗಳೂರು,ಫೆ.1: ದೇಶದ ಕೆಲವೇ ಕೆಲವು 24X7 ರಾಜಕಾರಣಿಗಳ ಪೈಕಿ ಅಗ್ರಪಂಕ್ತಿಯಲ್ಲಿರುವ ಕರ್ನಾಟಕದ ಹಿರಿಯ ರಾಜಕಾರಣಿ ದೇವೇಗೌಡರಿಂದ ನಿವೃತ್ತಿ ಘೋಷಣೆ ಎಂದರೆ ಅನೇಕರ ಹೃದಯ ಬಡಿತ ನಿಂತು ಬಿಡುತ್ತದೆ. ಅದರೆ, ಇಂಥದ್ದೊಂದು ಆಘಾತಕ್ಕೆ ಅಭಿಮಾನಿಗಳು ಈಗಲೇ ಸಜ್ಜಾದರೆ ಒಳ್ಳೆಯದು. ಚುನಾವಣಾ ರಾಜಕೀಯದಿಂದ ದೇವೇಗೌಡ ಅವರು ನಿವೃತ್ತಿ ಘೋಷಿಸಿದ್ದಾರೆ.
ಪದ್ಮನಾಭನಗರದ ಅವರ ನಿವಾಸದಲ್ಲಿ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ ಮಾತನಾಡಿದ ದೇವೇಗೌಡರು, ಇನ್ನು ಮುಂದೆ ಪಕ್ಷವನ್ನು ತಂದೆ-ಮಕ್ಕಳು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ನಾನು ಇದುವರೆಗೆ ನಿರಂತರವಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತ ಬಂದಿದ್ದೇನೆ. ನನಗೂ ವಯಸ್ಸಾಯ್ತು, ಇನ್ಮುಂದೆ ಚುನಾವಣೆ ಸ್ಪರ್ಧಿಸಲಾರೆ. ಹಾಸನ ಕ್ಷೇತ್ರದ ಜವಾಬ್ದಾರಿಯನ್ನು ರೇವಣ್ಣ, ಪ್ರಜ್ವಲ್ ಅವರಿಗೆ ವಹಿಸಿದ್ದೇನೆ ಎಂದಿದ್ದಾರೆ. [ದೇವೇಗೌಡರ ಮೊಮ್ಮಗ ಪ್ರಜ್ವಲ್ ಜೆಡಿಎಸ್ ಸೇರ್ಪಡೆ]
ಪ್ರಜ್ವ ಲ್ ಗೆ ಕಿವಿಮಾತು : ಹುಡುಗರನ್ನು ಜೊತೆಗಿಟ್ಟುಕೊಂಡು ಓಡಾಡುವುದೇ ರಾಜಕೀಯವಲ್ಲ. ಹಾಸನದಲ್ಲಿ ಹೋಗಿ ಅಲ್ಲಿನ ಜನರ ಸಂಕಷ್ಟಗಳನ್ನು ಅರಿಯಬೇಕು. ಕ್ಷೇತ್ರದ ಜನ ತೀರ್ಮಾನಿಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಪ್ರಜ್ವಲ್ ಗೆ ಟಿಕೆಟ್ ನೀಡಲಾಗುತ್ತದೆ. ನನ್ನ ಮೊಮ್ಮಗ ಎಂದು ಹೇಳಿ ಟಿಕೆಟ್ ಕೊಡುವುದಿಲ್ಲ.

ನಿಖಿಲ್ ಬಗ್ಗೆ : ಮೊಮ್ಮಗ ನಿಖಿಲ್, ರಾಜಕೀಯ ಹಾಗೂ ಸಿನಿಮಾ ಎರಡು ಕ್ಷೇತ್ರಗಳ ಪೈಕಿ ನಿಖಿಲ್ ಅವರು ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಅವರ ತಂದೆ ಕುಮಾರಸ್ವಾಮಿ ಅವರ ಮಾರ್ಗದರ್ಶನವಿದೆ. ಅವರ ಆಯ್ಕೆಯ ಕ್ಷೇತ್ರದಲ್ಲಿ ಅವರು ಮುಂದುವರೆಯಲಿ ನನ್ನ ಆಶೀರ್ವಾದ ಇರುತ್ತದೆ ಎಂದು ದೇವೇಗೌಡರು ಹೇಳಿದರು.
ಜೆಡಿಎಸ್ ಕಚೇರಿ ಬಗ್ಗೆ: ನಮ್ಮಲ್ಲಿ 40 ಜನ ಶಾಸಕರಿದ್ದು ಕಚೇರಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಷ್ಟೇಕೆ ಎಚ್ದಿಕೆ, ರೇವಣ್ಣ ಕೂಡಾ ಸೊಲ್ಲೆತ್ತಿಲ್ಲ. ಕಚೇರಿ ನಿರ್ವಹಣಾ ವೆಚ್ಚದ ಚಿಂತೆ ಕಾಡುತ್ತಿರಬಹುದು. ಕಚೇರಿ ಇಲ್ಲದ್ದಂತಾಗುವುದೆಂದರೆ ಅದು ಬೇಸರದ ಸಂಗತಿ. ಜೆಡಿಎಸ್ ಕಚೇರಿ ಕಟ್ಟುವ ಕಾರ್ಯ ನನ್ನ ಮುಂದಿದೆ. [ದೇವೇಗೌಡರ ಮೊಮ್ಮಗ ಪ್ರಜ್ವಲ್ ಇತ್ಯೋಪರಿ]
ಅಧಿಕಾರ ಶಾಶ್ವತವಲ್ಲ: ರಾಜಕೀಯ ಪ್ರವೇಶಿಸುವ ಕಿರಿಯರಿಗೆ ಮಾತು ಹೇಳುತ್ತಿದ್ದೇನೆ. ಅಧಿಕಾರ ಶಾಶ್ವತವಲ್ಲ. ನೀವು ನಿಮ್ಮ ಕ್ಷೇತ್ರದ ಜನರಿಗಾಗಿ ಮಾಡುವ ಸತ್ಕಾರ್ಯಗಳೇ ನಿಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ. ನಮ್ಮ ಕುಟುಂಬದ ಸದಸ್ಯರಿಗೆ ಯಾವುದೇ ಸ್ಥಾನವನ್ನು ನೀಡುವ ಮೊದಲು ಪ್ರತಿಯೊಬ್ಬ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಏಕಪಕ್ಷೀಯ ನಿರ್ಣಯ ನಮ್ಮ ಪಕ್ಷದಲ್ಲಿ ಇದುವರೆವಿಗೂ ನಡೆದಿಲ್ಲ, ಅಭ್ಯರ್ಥಿ ಆಯ್ಕೆ, ಚುನಾವಣೆಗೆ ಟಿಕೆಟ್ ನೀಡುವ ವಿಷಯವಾದರೂ ಸರಿ ಚರ್ಚೆ ನಡೆದು ಒಮ್ಮತದ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.












Click it and Unblock the Notifications