Breaking: ತುಂಗಭದ್ರಾ ಬಳಿಕ ಮಾಲವಿ ಡ್ಯಾಂ ರಿಪೇರಿ ಕಾರ್ಯ ಆರಂಭ
ಹೊಸಪೇಟೆ, ಆಗಸ್ಟ್ 21: ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಡ್ಯಾಂನ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿ ಆತಂಕ ಉಂಟಾಗಿತ್ತು. ಒಂದು ವಾರದ ಬಳಿಕ ಇದರ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ, ನದಿಗೆ ಹರಿದು ಹೋಗುತ್ತಿದ್ದ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈಗ ಮಾಲವಿ ಡ್ಯಾಂ ರಿಪೇರಿ ಕಾಮಗಾರಿ ಆರಂಭವಾಗಿದ್ದು, ಬೇಗಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಈ ಕುರಿತು ವಿಜಯನಗರ ಜಿಲ್ಲಾಡಳಿತ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿರುವ ಮಾಲವಿ ಡ್ಯಾಂ ರಿಪೇರಿ ಕಾಮಗಾರಿ ಆರಂಭವಾಗಿರುವ ಫೋಟೋವನ್ನು ಸಹ ಹಂಚಿಕೊಂಡಿದೆ. ಡ್ಯಾಂ ಒಡ್ಡು ಒಡೆದು ನೀರು ವ್ಯರ್ಥವಾಗುತ್ತಿರುವ ಕುರಿತು ಆಕ್ರೋಶ ವ್ಯಕ್ತವಾಗಿತ್ತು.

ಮಾಲವಿ ಡ್ಯಾಂನ 9ನೇ ಗೇಟ್ ದುರಸ್ತಿ ಮಾಡಬೇಕು ಎಂದು ಹಲವು ದಿನಗಳಿಂದ ಒತ್ತಾಯಿಸಲಾಗುತ್ತಿತ್ತು. ಕಳೆದ ವಾರ ತುಂಗಭದ್ರಾ ಡ್ಯಾಂ ಗೇಟ್ ನಂಬರ್ 19ರ ಕಾಮಗಾರಿ ಆರಂಭವಾದ ಬಳಿಕ ಈ ಡ್ಯಾಂ ಬಗ್ಗೆಯೂ ಗಮನ ನೀಡಿ ಎಂದು ವಿಜಯನಗರ ಜಿಲ್ಲಾಡಳಿತದ ಗಮನ ಸೆಳೆಯಲಾಗಿತ್ತು.
ಡ್ಯಾಂನ 9ನೇ ಗೇಟ್‌ನಲ್ಲಿ ನೀರು ಸಂಗ್ರಹಕ್ಕೆ ಹಾಕಿದ್ದ ಒಡ್ಡು ಒಡೆದ ಹೋದ ಪರಿಣಾಮ ಬಹುಪಾಲು ನೀರು ಹರಿದು ಹೋಗುತ್ತಿತ್ತು. ಡ್ಯಾಂ ದುರಸ್ತಿ ಕಾರ್ಯಕ್ಕಾಗಿಯೇ 4.02 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಸುಮಾರು 2 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂ ಇದಾಗಿದೆ.
ಮಾಲವಿ ಡ್ಯಾಂ ಭರ್ತಿಯಾದರೆ ಡ್ಯಾಂ ಸುತ್ತಮುತ್ತಲೂ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಅಲ್ಲದೇ ಸುಮಾರು 16 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿಗೆ ಅನುಕೂಲವಾಗಲಿದೆ. ಸದ್ಯ ಜಲಾಶಯದ ಗೇಟ್‌ಗಳಲ್ಲಿ ಸುಮಾರು 5 ಅಡಿಗಳಷ್ಟು ನೀರಿನ ಸಂಗ್ರಹವಿದೆ.
ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಜುಲೈನಲ್ಲಿ ಮಾಲವಿ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗೇಟ್ ದುರಸ್ತಿ ಮಾಡಬೇಕು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ರೈತರು ಡಿಸಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.
ತುಂಗಭದ್ರಾ ಡ್ಯಾಂನಿಂದ ಮಾಲವಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ರೂಪಿಸಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. 2017ರಲ್ಲಿ ಈ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಅಲ್ಲದೇ ಡ್ಯಾಂ ಅಭಿವೃದ್ಧಿಗೆ 13 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಳ್ಳಾರಿ ಜಿಲ್ಲೆ ವಿಭಜನೆಗೊಂಡಿತು. ಬಳ್ಳಾರಿಯಲ್ಲಿದ್ದ ಹಗರಿಬೊಮ್ಮನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರಿತು. ತುಂಗಭದ್ರಾದಿಂದ ಮಾಲವಿ ಡ್ಯಾಂ ತುಂಬಿಸುವ ಯೋಜನೆ ಸುಮಾರು 145 ಕೋಟಿ ರೂ. ವೆಚ್ಚದ್ದಾಗಿದೆ.
2022ರಲ್ಲಿ 13 ವರ್ಷದ ಬಳಿಕ ಮಾಲವಿ ಡ್ಯಾಂ ಭರ್ತಿಯಾಗಿತ್ತು. ಆಗ ರೈತರು ಸಂತಸಗೊಂಡಿದ್ದರು. ಕಾಲುವೆಗಳ ಮೂಲಕ ನೀರು ಹರಿದು, ಬೆಳೆಗಳಿಗೆ ಸಹಾಯಕವಾಗಿತ್ತು. ಮೂರು ಮೋಟಾರುಗಳ ಮೂಲಕ ತುಂಗಭದ್ರಾ ಡ್ಯಾಂ ನೀರನ್ನು ಮಾಲವಿ ಡ್ಯಾಂಗೆ ಹರಿಸುವ ಕಾಮಗಾರಿಯ ನೀರು ಡ್ಯಾಂಗೆ ಬಂದು ಸೇರಿತ್ತು.












Click it and Unblock the Notifications