ಎಚ್.ಆಂಜನೇಯ ಅವರನ್ನು ಸಿದ್ದರಾಮಯ್ಯ ತಳ್ಳಿದ್ದು ಅಸ್ಪೃಶ್ಯತೆ ಸೂಚಕ: ರಾಮುಲು
ಬಳ್ಳಾರಿ, ಏಪ್ರಿಲ್ 15: ಎಚ್.ಆಂಜನೇಯ ಅವರನ್ನು ವೇದಿಕೆಯ ಮೇಲೆ ಸಿದ್ದರಾಮಯ್ಯ ಅವರು ಪಕ್ಕಕ್ಕೆ ತಳ್ಳಿದ್ದು ಅಸ್ಪೃಶ್ಯತೆಯನ್ನು ತೋರುತ್ತದೆ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಅವರು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ವೇದಿಕೆ ಮೇಲೆ ರಾಹುಲ್ ಗಾಂಧಿ ಅವರನ್ನು ಮಾತನಾಡಿಸಲು ಬಂದ ಮಾಜಿ ಸಚಿವ ಎಚ್.ಆಂಜನೇಯ ಅವರನ್ನು ಸಿದ್ದರಾಮಯ್ಯ ಅವರು ಬದಿಗೆ ಸರಿಸಿ ರಾಹುಲ್ ಅವರನ್ನು ಮುಂದಕ್ಕೆ ಕರೆದೊಯ್ದರು.
ಸಿದ್ದರಾಮಯ್ಯ ಅವರು ಎಚ್.ಆಂಜನೇಯ ಅವರನ್ನು ತಳ್ಳಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಸಿದ್ದರಾಮಯ್ಯ ಅವರು ಆಂಜನೇಯ ಅವರನ್ನು ತಳ್ಳಿದ್ದನ್ನು ರಾಮುಲು ಅವರು ಆಕ್ಷೇಪಿಸಿದ್ದಾರೆ.

ದಲಿತ ಮುಖಂಡ ಎಚ್.ಆಂಜನೇಯ ಅವರನ್ನು ತಳ್ಳಿದ್ದು ಆ ಸಮುದಾಯಕ್ಕೆ ಮಾಡಿದ ಅವಮಾನ, ಸಿದ್ದರಾಮಯ್ಯ ಅವರ ಈ ನಡೆ ಅಸ್ಪಶ್ಯತೆಯನ್ನು ತೋರುತ್ತದೆ ಎಂದು ರಾಮುಲು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಅಹಂ, ಅಹಂಕಾರವನ್ನು ಇದು ತೋರಿಸುತ್ತದೆ. ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದರೂ ಇವರು ಸೂಪರ್ ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರ ಮುಂದಿನ ದಿನಗಳು ಬಹಳ ಕೆಟ್ಟದಾಗಿ ಇರಲಿವೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಯಾರದೋ ಹೆಗಲಮೇಲೆ ಬಂದೂಕು ಇಟ್ಟು ಶೂಟ್ ಮಾಡೋದನ್ನು ಸಿದ್ದರಾಮಯ್ಯ ಬಿಡಬೇಕು.ಸಿದ್ದರಾಮಯ್ಯಗೆ ಕೆಟ್ಟ ದಿನಗಳು ಬರುತ್ತಿವೆ. ಲೋಕಸಭೆ ಚುನಾವಣೆ ಆದ ಬಳಿಕ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಆಗಲಿವೆ ಎಂದು ಶ್ರೀರಾಮುಲು ಹೇಳಿದ್ದಾರೆ.












Click it and Unblock the Notifications