ಬಳ್ಳಾರಿಗೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ನೇಮಕ, ಕಾಂಗ್ರೆಸ್ ಶಾಸಕರ ಅಸಮಾಧಾನ
ಬಳ್ಳಾರಿ, ಜುಲೈ, 19: ಬಳ್ಳಾರಿ ಜಿಲ್ಲಾಧಿಕಾರಿ ಆಗಿ ವೆಂಕಟೇಶ್ ಟಿ. ಅವರನ್ನು ನೇಮಕ ಮಾಡಿದ ಸರ್ಕಾರದ ನಡೆಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಅವರನ್ನು ಸೋಮವಾರ ಸಂಜೆ ಸರ್ಕಾರವು ಬಳ್ಳಾರಿಗೆ ವರ್ಗಾಯಿಸಿತು. ಆದರೆ, ಬಳ್ಳಾರಿ ಜಿಲ್ಲಾಧಿಕಾರಿ ಆಗಿರುವ ಪವನ್ ಕುಮಾರ್ ಅವರಿಗೆ ಸ್ಥಳ ತೋರಿಸಿಲ್ಲ. ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆ ಬಳ್ಳಾರಿ ಜಿಲ್ಲೆಯ ಶಾಸಕರು ವೆಂಕಟೇಶ್ ಅವರ ನೇಮಕ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಮಾಡಿದ ಶಾಸಕರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವೆಂಕಟೇಶ್ ಅವರನ್ನು ವರ್ಗಾವಣೆ ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಪರೋಕ್ಷವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ನಡುವೆ ವೆಂಕಟೇಶ್ ಮಂಗಳವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಲು ಬಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಅವರು ಶಾಸಕರ ಭೇಟಿಗೆ ಬೆಂಗಳೂರಿಗೆ ತೆರಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಬಳ್ಳಾರಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವೆಂಕಟೇಶ್ ಟಿ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ನಿನ್ನೆಯಷ್ಟೇ ಹೊರಡಿಸಿತ್ತು.
ಹಾಲಿ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ವೆಂಕಟೇಶ್ ಅವರು ಐಎಎಸ್ ಶ್ರೇಣಿಯ ಅಧಿಕಾರಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ವೆಂಕಟೇಶ್ ಅವರು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಹಾಲಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರನ್ನು ಬೇರೆ ಕಡೆ ವರ್ಗಾಯಿಸಲಾಗಿದ್ದು, ಸ್ಥಳ ನಿಗದಿ ಆಗಿಲ್ಲ.
ಇನ್ನು ವಿಜಯನಗರ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತಿ ಸಿಇಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಎಸ್.ದಿವಾಕರ್ ಅವರನ್ನು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.












Click it and Unblock the Notifications