Vijayanagar: ಫ್ರೂಟ್ಸ್ ತಂತ್ರಾಶದಲ್ಲಿ ರೈತರ ಸಂಪೂರ್ಣ ಮಾಹಿತಿ ನವೀಕರಣಕ್ಕೆ ಡಿ.31ರ ಗಡುವು ನೀಡಿದ ಕೃಷ್ಣ ಬೈರೇಗೌಡ
ವಿಜಯನಗರ ಡಿಸೆಂಬರ್ 26: ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಬೆಳೆ ಮತ್ತು ಜಮೀನಿನ ಮಾಹಿತಿ ನವೀಕರಣಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಅವರು ಡಿಸೆಂಬರ್. 31 ರ ವರೆಗೆ ಗಡುವು ನೀಡಿದರು.
ವಿಜಯನಗರ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, "ಬರ ಪರಿಹಾರದ ಹಣ ರೈತರಿಗೆ ಆನ್ಲೈನ್ ಮೂಲಕವೇ ತಲುಪಲಿದೆ. "ಫ್ರೂಟ್ಸ್" ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ.

ಆದರೆ, ವಿಜಯನಗರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರು ಎಲ್ಲಾ ರೈತರ ಜಮೀನಿನ ಒಟ್ಟು ವಿಸ್ತೀರ್ಣ ಹಾಗೂ ಬೆಳೆ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಶೇ. 77 ರಷ್ಟು ಮಾತ್ರ ನಮೂದಿಸಲಾಗಿದೆ. ಈ ಕೆಲಸ ಮುಗಿಯುವವರೆಗೆ ರೈತರಿಗೆ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.
"ರೈತರಿಗೆ ಮೊದಲ ಕಂತಿನ ಹಣ ನೀಡಲು ಸರ್ಕಾರದ ಬಳಿ ಹಣ ಇದೆ. ಆದರೂ ಫ್ರೂಟ್ಸ್ ತಂತ್ರಾಂಶದ ನವೀಕರಣಗೊಳ್ಳದೆ ರೈತರಿಗೆ ಹಣ ಬಿಡುಗಡೆ ಸಾಧ್ಯವಿಲ್ಲ. ಹೀಗಾಗಿ ಡಿಸೆಂಬರ್ 31 ರ ಒಳಗಾಗಿ ಫ್ರೂಟ್ಸ್ ನಲ್ಲಿ ರೈತರ ಜಮೀನಿನ ಮಾಹಿತಿ ನಮೂದಿಸಿ" ಎಂದು ಗಡುವು ನೀಡಿದರು.
ಮುಂದುವರೆದು, "ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಿ" ಎಂದು ಸೂಚಿಸಿದರು.

ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡಲು ಕರೆ:
ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ.
ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಕುಡಿಯುವ ನೀರು-ಮೇವಿನ ಬಗ್ಗೆ ಎಚ್ಚೆತ್ತುಕೊಳ್ಳಿ:
ವಿಜಯನಗರ ಜಿಲ್ಲೆಯಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಮುಂಜಾಗ್ರತಾ ಕ್ರಮವಾಗಿ ಈಗಲೇ ಜಿಲ್ಲೆಯಲ್ಲಿ 272 ಟ್ಯಾಂಕರ್ ಗಳಿಗೆ ಟೆಂಡರ್ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ ಎಂದು ಅವರು ಪ್ರಶಂಸಿಸಿದರು.
ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡರು 24 ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. 15 ದಿನಗಳಲ್ಲಿ ಬಿಲ್ ಗೆ ಹಣ ಪಾವತಿ ಮಾಡಬೇಕು.
ಮೇವಿನ ವಿಚಾರದಲ್ಲೂ ಮುಂಜಾಗ್ರತಾ ತಯಾರಿ ಮಾಡಿಕೊಳ್ಳಬೇಕು. ರಾಜ್ಯದ ಮೇವನ್ನು ಪಕ್ಕದ ರಾಜ್ಯಗಳಿಗೆ ಕಳ್ಳಸಾಗಾಣೆ ಮಾಡುವುದನ್ನು ನಿರ್ಬಂಧಿಸಿ ಎಂದು ಅವರು ತಿಳಿಸಿದರು.
ನರೇಗಾದಲ್ಲಿ ಮಾನವ ದಿನ ಹೆಚ್ಚಿಸಲು ಕೇಂದ್ರಕ್ಕೆ ಮತ್ತೊಮ್ಮೆ ಮನವಿ
ನರೇಗಾ ಯೋಜನೆಯ ಅಡಿಯಲ್ಲಿ ಮಾನವ ದಿನ ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಎದುರು ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಜಯನಗರ ಜಿಲ್ಲೆಯಲ್ಲಿ 6000 ಕ್ಕೂ ಹೆಚ್ವು ಜನರ ನರೇಗಾ ಮಾನವ ದಿನ ಈಗಾಗಲೇ ಮುಗಿದಿದ್ದು, ಅನೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬರ ಘೋಷಿಸುತ್ತಿದ್ದಂತೆ ನರೇಗಾ ಮಾನವ ದಿನ ಹೆಚ್ಚಿಸಲೇಬೇಕು. ಆದರೆ, ಕೇಂದ್ರ ಸರ್ಕಾರ ಈವರೆಗೆ ನಮ್ಮ ಮನವಿಗೆ ನಿರ್ಧಾರ ತೆಗೆದುಕೊಂಡಿಲ್ಲ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಬಗ್ಗೆ ಮತ್ತೊಮ್ಮೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮೂಲಕ ಮನವಿ ಮಾಡಲಾಗುವುದು ಎಂದರು.
ಬಗರ್ ಹುಕುಂ ಅರ್ಜಿಗಳ ಶೀಘ್ರ ವಿಲೇಗೆ ಸೂಚನೆ
ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿಗಳ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, "ನಮೂನೆ 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ವಿಜಯನಗರ ಜಿಲ್ಲೆಯಲ್ಲಿ 26,365 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಹೇಗೆ ವಿಲೇವಾರಿ ಮಾಡುವಿರಿ? ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮುಂದುವರೆದು, "ನಿಜವಾದ ಸಾಗುವಳಿದಾರರಿಗೆ ಭೂ ನೀಡುವ ಸಲುವಾಗಿ ಬಗರ್ ಹುಕುಂ ಆ್ಯಪ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ಅರ್ಜಿದಾರರ ನಿರ್ದಿಷ್ಟ ಪ್ರದೇಶಕ್ಕೆ ತೆರಳಿ ಆ್ಯಪ್ ಮೂಲಕ "ಜಿಯೋ ಫೆನ್ಸಿಂಗ್" ಮಾಡಬೇಕು. ಆ ಮೂಲಕ ಸ್ಯಾಟಲೈಟ್ ಇಮೇಜ್ ಪಡೆದು ಕೃಷಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು.
ಆನಂತರ ಅರ್ಜಿದಾರರಿಗೆ ಬೇರೆಲ್ಲೂ ಕೃಷಿ ಭೂಮಿ ಇಲ್ಲ ಎಂಬ ಕುರಿತು ಮಾಹಿತಿ ಖಚಿತಪಡಿಸಿಕೊಂಡು ಭೂ ಮಂಜೂರು ಮಾಡಬೇಕು. ಕನಿಷ್ಟ ಪ್ರತಿ ವಾರಕ್ಕೊಂದು ಗ್ರಾಮಗಳಲ್ಲಿ ಈ ಕೆಲಸ ಆಗಬೇಕು. ಸಾಗುವಳಿ ಚೀಟಿ ಹಾಗೂ ಹಣ ಪಾವತಿ ಎರಡೂ ಡಿಜಿಟಲ್ ರೂಪದಲ್ಲಿ ಇರಬೇಕು, ತಹಶೀಲ್ದಾರರೇ ಕ್ರಯ ಮಾಡಿಕೊಟ್ಟು ರೈತರಿಗೆ ತುಸು ನೆಮ್ಮದಿ ನೀಡಿ" ಎಂದು ಅವರು ಎಚ್ಚರಿಸಿದರು.












Click it and Unblock the Notifications