Bellary City Constituency: ಟಿಕೆಟ್ ಹಂಚಿಕೆಯೇ ಕಾಂಗ್ರೆಸ್‌ಗೆ ಸವಾಲು, ಗೆಲುವು ಯಾರ ಪಾಲಿಗೆ, ವರದಿ-ವಿಶ್ಲೇಷಣೆ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಇಡೀ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ ಇದೆ. ಈ ಸಲವು ಪ್ರತಿಷ್ಠೆಯ ಕಣವಾಗಿ ಮಾರ್ಪಡಲಿರುವ ಬಳ್ಳಾರಿ ನಗರದ ಚುನಾವಣೆ-ಫಲಿತಾಂಶ ಕುತೂಹಲ ಕೆರಳಿಸಿದೆ.
ಬೆಂಗಳೂರು, ಮಾರ್ಚ್ 21: ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 9 ವಿಧಾನಸಭಾ ಕ್ಷೇತ್ರಗಳು ಬಳ್ಳಾರಿ ಜಿಲ್ಲೆಯಲ್ಲಿವೆ. ಆ ಪೈಕಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಇಡೀ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ ಹೊಂದಿದೆ.
ಹಲವು ಕಾರಣಗಳಿಂದ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಟ್ಟಿಗೆ ಇದು ಪ್ರತಿಷ್ಠೆಯ ಕಣವಾಗಿ ಬದಲಾಗಲಿದೆ. ಕಳೆದ 2018ರ ಚುನಾವಣೆಯಲ್ಲಿ ಬಳ್ಳಾರಿಯ ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿ. ಸೋಮಶೇಖರ ರೆಡ್ಡಿ ಅವರು ಕಾಂಗ್ರೆಸ್‌ನ ಅನೀಲ್ ಎಚ್.ಲಾಡ್ ಅವರನ್ನು ಸೋಲಿಸಿ 76 ಮತಗಳಿಂದ ಚುನಾಯಿತರಾದರು. ಇಲ್ಲಿ ಸ್ಥಳಿಯ ಜೆಡಿಎಸ್ ಪಕ್ಷ ಸಹ ಪ್ರತಿ ಸ್ಪರ್ಧೆ ಒಡ್ಡಿತ್ತು.

2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ಬಳ್ಳಾರಿಯಲ್ಲಿ ಒಟ್ಟು ಒಂಬತ್ತು ಕ್ಷೇತ್ರಗಳಾದವು. ಅದರಲ್ಲಿ ಏಳು ಕ್ಷೇತ್ರಗಳು ಮಿಸಲಾತಿಗೆ ಒಳ್ಳಪಟ್ಟಿವೆ. ಪುನರ್ ವಿಂಗಡಣೆ ಆದ ವರ್ಷವೇ ಎದುರಾದ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಿತು. ನಂತರ 2013ರಲ್ಲಿ ಕಾಂಗ್ರೆಸ್ ಗೆದ್ದಿದೆ. ಇದೀಗ ಮತ್ತೆ ಗೆಲ್ಲಲು ಅಗತ್ಯ ಸಿದ್ಧತೆಗಳನ್ನು ಕೈ ಪಡೆ ಮಾಡಿಕೊಳ್ಳುತ್ತಿದೆ.
ಕೇವಲ ಬಳ್ಳಾರಿ ನಗರ ಮಾತ್ರವಲ್ಲದೇ ಕರ್ನಾಟಕದ ಬಹುತೇಕ ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿರುವ ಕಾಂಗ್ರೆಸ್‌ಗೆ ಬಳ್ಳಾರಿ ನಗರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದೇ ದೊಡ್ಡ ಸವಾಲಾಗಿದೆ. ಹೌದು ಚುನಾವಣೆ ದಿನಗಳು ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಂದ 15ಕ್ಕೂ ಹೆಚ್ಚು ಮಂದಿ ಟಿಕೆಟ್ ಬಯಸಿದ್ದಾರೆ. ಅದರಲ್ಲಿ ಬಹುತೇಕ ಪ್ರಭಾವಿಗಳೆ ಆಗಿದ್ದಾರೆ. ಹೀಗಾಗಿ ಒಬ್ಬರನ್ನೆ ಕಣಕ್ಕೆ ಇಳಿಸಬೇಕು ಎಂಬುದರಲ್ಲಿ ಕಾಂಗ್ರೆಸ್ ಸವಾಲು ಎದುರಾಗಿದೆ.
ಕಾಂಗ್ರೆಸ್‌ಗೆ ಟಿಕೆಟ್ ನೀಡುವುದೇ ಸವಾಲು
ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎನ್. ಸೂರ್ಯ ನಾರಾಯಣ ರೆಡ್ಡಿಯವರ ಪುತ್ರ ನಾರಾ ಭರತ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಅಲಂ ವೀರಭದ್ರಪ್ಪ ಮಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಲ್ಲಂ ಪ್ರಶಾಂತ್, ಮಾಜಿ ಸಚಿವ ಮಂಡೂರು ದಿವಾಕರ್ ಬಾಬು, ಕಾಂಗ್ರೆಸ್ ಹಾಲಿ ಜಿಲ್ಲಾಧ್ಯಕ್ಷ ಜಿ.ಎಸ್ ಮಹ್ಮದ್ ರಫೀಕ್,ಮಾಜಿ ಶಾಸಕ ಅನಿಲ್ ಲಾಡ್, ಯುವ ಮುಖಂಡ ಸುನೀಲ್ ರಾವೂರು ಇವರು ಪ್ರಮುಖ ಟಿಕೆಟ್ ಆಕಾಂಕ್ಷಿಗಳು.

ಕಳೆದ ಚುನಾವಣೆಯಲ್ಲಿ ಎರಡು ಪ್ರಕ್ಷಗಳ ವಿರುದ್ಧ ಪ್ರಬಲ ಪೈಪೋಟಿ ಒಡ್ಡಿದ್ದ ಜೆಡಿಎಸ್ ಮೌನವಾಗಿದೆ. ಯಾವುದೇ ರಾಜಕೀಯ ಚಟುವಟಿಕೆ ಮಾಡಿದಂತಿಲ್ಲ. ಜೆಡಿಎಸ್‌ನಿಂದ ಜಿಲ್ಲಾಧ್ಯಕ್ಷ ಪಿ.ಎಸ್. ಸೋಮಲಿಂಗನೌಡ ತಾವು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಮತ್ತಾರು ಇಲ್ಲಿಂದ ಟಿಕೆಟ್ ಬಯಸಿಲ್ಲ ಎನ್ನಲಾಗಿದೆ.
ಹಿಂದಿನ ಸಲ ಬಳ್ಳಾರಿ ವ್ಯಾಪ್ತಿಯಲ್ಲಿ ಅರ್ಧದಷ್ಟು ಕ್ಷೇತ್ರಗಳನ್ನುಗೆಲ್ಲುಲು ಸಾಧ್ಯವಾಗದ ಬಿಜೆಪಿಯು ಕಾಂಗ್ರೆಸ್ ಪ್ರಾಬಲ್ಯಕ್ಕೆ ಧಕ್ಕೆ ತರಲು ಸಜ್ಜಾಗಿದೆ. ಈ ಸಂಬಂಧ ಚುನಾವಣಾ ರಣ ತಂತ್ರ ರೂಪಿಸುತ್ತಿದೆ. ಇತ್ತ ಬಿಜೆಪಿಯಿಂದ ಹಾಲಿ ಶಾಸಕ ಸೋಮಶೇಖರ ರೆಡ್ಡಿ ಅವರೇ ಅಖಾಡಕ್ಕೆ ಇಳಿಯಲಿದ್ದಾರೆ. ಇದೇ ಬಹುತೇಕ ಅಂತಿಮವಾಗಿದೆ.

ಕ್ಷೇತ್ರದ ತುಂಬಾ ಸದ್ದು ಮಾಡುತ್ತಿರುವ ಉಡುಗೊರೆ-ಓಲೈಕೆ
ಮತದಾರರ ಓಲೈಕೆಗಾಗಿ ಬಳ್ಳಾರಿ ನಗರದಲ್ಲಿ ಹಾಲಿ ಶಾಸಕರು ಸಹಿತ ಟಿಕೆಟ್ ಆಕಾಂಕ್ಷಿಗಳು ಈವಾಗಿನಿಂದಲೇ ಮತದಾರರಲ್ಲಿ ಮತ ಯಾಚನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಕೊಳಗೇರಿ ನಿವಾಸಿಗಳಿಗೆ ಪಟ್ಟಾ ವಿತರಣೆ, ಮನೆ ಮನೆಗಳಿಗೆ ತೆರಳಿ ಕುಕ್ಕರ್ ವಿತರಣೆ, ಬೀದಿ ವ್ಯಾಪಾರಿಗಳಿಗೆ ಛತ್ರಿ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ. ಇನ್ನೂ ಕೆಲವೆಡೆ ಬೀದಿ ತುಂಬೆಲ್ಲ ಸಾರ್ವಜನಿಕರಿಗೆ ಸೀರೆ, ಬಟ್ಟೆಗಳ ಕಿಟ್ ಹಂಚಿಕೆ ಮಾಡಲಾಗುತ್ತಿದೆ.
ಈ ಮೂಲಕ ಉಡುಗೊರೆ ನೀಡಿ ಓಲೈಕೆ ರಾಜಕಾರಣ ಮಾಡಲಾಗುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲೇಬೇಕೆಂದು ಹಠ ತೊಟ್ಟಂತಿದೆ. ಸದ್ಯ ಉಡುಗೊರೆ ವಿತರಣೆ, ಆಮಿಷ ಒಡ್ಡಿ ಮತದಾರರ ಓಲೈಕೆಗೆ ರಾಜ್ಯ ಚುನಾವಣಾ ಆಯೋಗ ಕಡಿವಾಣ ಹಾಕಬೇಕಿದೆ.












Click it and Unblock the Notifications