ಕಲಬುರಗಿಯಲ್ಲಿ ಉದ್ಯೋಗ ಮೇಳ: ಬಳ್ಳಾರಿಯಿಂದ ಹೆಚ್ಚುವರಿ ಬಸ್
ಬಳ್ಳಾರಿ, ಏಪ್ರಿಲ್ 14: ಕಲ್ಯಾಣ ಕರ್ನಾಟಕ ಭಾಗದ ಯುವಕ/ ಯುವತಿಯರಿಗೆ ಉದ್ಯೋಗ ಕಲ್ಪಿಸಲು ಕಲಬುರಗಿಯಲ್ಲಿ ಏಪ್ರಿಲ್ 16ರಂದು ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಉದ್ಯೋಗ ಮೇಳಕ್ಕೆ ತೆರಳುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಉದ್ಯೋಗ ಮೇಳಕ್ಕೆ ನೋಂದಣಿ ನಡೆಯುತ್ತಿದ್ದು, ನೋಂದಣಿ ಮಾಡಿಸದ ಅಭ್ಯರ್ಥಿಗಳು ಸಹ ನೇರವಾಗಿ ಸ್ಥಳಕ್ಕೆ ತೆರಳಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಯುವಜನತೆಗಾಗಿ ಬೃಹತ್ ಉದ್ಯೋಗ ಮೇಳವನ್ನು ಕಲಬುರಗಿಯಲ್ಲಿ ಆಯೋಜಿಸಲಾಗಿದೆ. ಆಸಕ್ತ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳು ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಪ್ರವೇಶ ಉಚಿತವಾಗಿದೆ.

ಕಲಬುರಗಿಯ ಕೆ.ಸಿ.ಟಿ ಕಾಲೇಜ್ ಕ್ಯಾಂಪಸ್‌ನಲ್ಲಿ ಏಪ್ರಿಲ್ 16ರಂದು ಈ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ವಿದ್ಯಾರ್ಹತೆ ಇರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು ಎಂದು ತಿಳಿಸಲಾಗಿದೆ.
ಹೆಚ್ಚುವರಿ ಬಸ್‌ಗಳು: ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ-2025 ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಬಳ್ಳಾರಿಯಿಂದ ಏಪ್ರಿಲ್ 15ರಂದು ಜನದಟ್ಟಣೆಯ ಮೇರೆಗೆ ಕಕರಸಾನಿ ಬಳ್ಳಾರಿ ವಿಭಾಗದಿಂದ ಹೆಚ್ಚುವರಿ ಬಸ್ ಸೌಕರ್ಯವನ್ನು ಒದಗಿಸಲಾಗುತ್ತಿದೆ.
ಈ ಹೆಚ್ಚುವರಿ ಸಾರಿಗೆ ಸೇವೆಯನ್ನು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಮನವಿ ಮಾಡಿದ್ದಾರೆ.
ನೋಂದಣಿಗೆ ಲಿಂಕ್. ಕಲಬುರಗಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು https://udyogamela.skillconnect.kaushalkar.com/ext/form/54/1/apply ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಕಲ್ಯಾಣ ಕರ್ನಾಟಕ ಭಾಗದ ಯುವ ಜನತೆಗಾಗಿ ಕೌಶಲ್ಯದೊಂದಿಗೆ ಉದ್ಯೋಗವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸೂಚನೆಯಂತೆ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಕಲ್ಯಾಣ ಕರ್ನಾಟಕದ ವ್ಯಾಪ್ತಿಗೆ ಬರುವ 7 ಜಿಲ್ಲೆಗಳ ಹಾಗೂ ಇತರೆ ಜಿಲ್ಲೆಗಳಿಂದಲೂ ಅಂದಾಜು 20,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು, 200ಕ್ಕೂ ಹೆಚ್ಚು ಉದ್ಯೋಗದಾತರು ಈ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ. ಆದ್ದರಿಂದ ವಿವಿಧ ಜಿಲ್ಲೆಗಳಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ನಿರುದ್ಯೋಗಿ ಯುವಕ-ಯುವತಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣ ಅವಕಾಶ ಆಗಿದ್ದು, ಪ್ರಾದೇಶಿಕ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಈ ಉದ್ಯೋಗ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ/ ಪಿಯುಸಿ/ ಐಟಿಐ/ ಡಿಪ್ಲೋಮಾ/ ಬಿಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿದ ಹಾಗೂ ಪಡೆದು ಉದ್ಯೋಗ ಪಡೆಯದ ಎಲ್ಲಾ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶಗಳನ್ನು ಪಡೆಯಲು ಇದೊಂದು ಸುರ್ವಣವಕಾಶವಾಗಿದೆ. ಸರ್ಕಾರದ ಯುವನಿಧಿ ಯೋಜನೆಯ ಫಲಾನುಭವಿಗಳು ಸಹ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಗಿದೆ.












Click it and Unblock the Notifications