ವಿಶೇಷ ವರದಿ; ಲೆಕ್ಕಪರಿಶೋಧಕನ ಸರ್ಕಾರಿ ಶಾಲೆ ಪ್ರೇಮ
ಬಳ್ಳಾರಿ, ಆಗಸ್ಟ್ 23; ಬಳ್ಳಾರಿಯ ಲೆಕ್ಕಪರಿಶೋಧಕರೊಬ್ಬರು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಹೆಸರಿನಲ್ಲಿ 1000 ರೂ. ಠೇವಣಿ ಇಡುತ್ತಿದ್ದಾರೆ. ಸರ್ಕಾರಿ ಶಾಲೆಯಿಂದಲೇ ತನ್ನ ಜೀವನ ರೂಪಿಸಿಕೊಂಡಿರುವ ಅವರು ಈಗ ಬಡ ಮಕ್ಕಳ ನೆರವಿಗೆ ನಿಂತಿದ್ದಾರೆ.
ಬಳ್ಳಾರಿ ಜಿಲ್ಲೆಯ ಕರೂರು ಗ್ರಾಮದ ಸಿದ್ದರಾಮೇಶ್ವರ ಗೌಡರು ಕಡು ಬಡತನದಲ್ಲಿಯೇ ಓದಿ ಲೆಕ್ಕಪರಿಶೋಧಕರಾಗಿದ್ದಾರೆ. ಉನ್ನತ ಹುದ್ದೆಯನ್ನು ಅಲಂಕರಿಸಿರುವ ಇವರು ಈಗ ತಮ್ಮಂತೆ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ಮೇಲೆ ಸಿದ್ದರಾಮೇಶ್ವರ ಗೌಡರಿಗೆ ಅಪಾರವಾದ ಪ್ರೀತಿ ಇದೆ. ಆದ್ದರಿಂದ ಸರ್ಕಾರಿ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳಿಗೆ 1 ಸಾವಿರ ರೂ. ಹಣವನ್ನು ನೀಡುತ್ತಿದ್ದು, ಅದನ್ನು ಠೇವಣಿ ಇಡುತ್ತಿದ್ದಾರೆ.
ಸರ್ಕಾರಿ ಶಾಲೆಯಿಂದಲೇ ಜೀವನ ಕಟ್ಟಿಕೊಂಡ ಸಿದ್ದರಾಮೇಶ್ವರ ಗೌಡ ತಮ್ಮ ಈ ಕಾರ್ಯದ ಮೂಲಕ ಶಾಲೆಯ ಋಣವನ್ನು ತೀರಿಸುತ್ತಿದ್ದಾರೆ. ಬಳ್ಳಾರಿಯ ಶಾಸ್ತ್ರೀ ನಗರದ ಸರ್ಕಾರಿ ಶಾಲೆಗೆ ಮಕ್ಕಳು ದಾಖಲಾದರೆ ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು 1 ಸಾವಿರ ರೂ. ಹಣವನ್ನು ಜಮೆ ಮಾಡುತ್ತಾರೆ.
ಇವತ್ತಿನ ದಿನಗಳಲ್ಲಿ ಬಹುತೇಕ ಪೋಷಕರು ಸರ್ಕಾರಿ ಶಾಲೆ ಎಂದರೆ ದನದ ಸಂತೆ ಅಂತ ಭಾವಿಸಿಕೊಳ್ಳುತ್ತಾರೆ. ಅದರಲ್ಲೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ತೀರ ಕಡಿಮೆ ಆಗಿದೆ. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಲು ಶಿಕ್ಷಣ ಇಲಾಖೆ ಹಲವು ಅಭಿಯಾನಗಳನ್ನು ಸಹ ನಡೆಸುತ್ತಿದೆ.

ಸರ್ಕಾರಿ ಶಾಲೆಯ ಬಗ್ಗೆ ಜಾಗೃತಿ
ಸಿದ್ದರಾಮೇಶ್ವರ ಗೌಡ ಪ್ರತಿ ಮನೆಗೆ ತೆರಳಿ ಪೋಷಕರಿಗೆ ಸರ್ಕಾರಿ ಶಾಲೆಯ ಸೌಲಭ್ಯಗಳು ಮತ್ತು ಅವುಗಳಿಂದಾಗುವ ಪ್ರಯೋಜನ ಕುರಿತು ತಿಳಿ ಹೇಳುತ್ತಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳು ಬರುವ ಹಾಗೆ ಮಾಡುತ್ತಿದ್ದಾರೆ. ಈ ದಿನಗಳಲ್ಲಿ ಸರ್ಕಾರಿ ಶಾಲೆಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಉಳಿಯಬೇಕು ಎಂದು ತಮ್ಮ ಸ್ವಇಚ್ಛೆಯಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ.

ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ
ಪೋಷಕರ ಚಿತ್ತವನ್ನು ಸರ್ಕಾರಿ ಶಾಲೆ ಕಡೆ ಆಕರ್ಷಿಸಲು ಒಂದನೇ ತರಗತಿಗೆ ಪ್ರವೇಶ ಮಾಡುವ ಪ್ರತಿ ಮಕ್ಕಳಿಗೆ ತಾನು ದುಡಿದ ಸ್ವಂತ ಹಣದಿಂದ 1 ಸಾವಿರ ರೂ. ಠೇವಣಿ ಇಡುತ್ತಾರೆ. 18 ವರ್ಷದ ಬಳಿಕ ಮಗುವಿನ ವ್ಯಾಸಂಗಕ್ಕೆ ಇದು ಸಹಾಯವಾಗುತ್ತದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿದ್ದಾರೆ ಮತ್ತು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿಕೊಂಡು ಬಂದಿದ್ದಾರೆ.

ಸಿದ್ದರಾಮೇಶ್ವರ ಗೌಡ ಹೇಳುವುದೇನು?
"ಸರ್ಕಾರಿ ಶಾಲೆ ಉಳಿವಿಗಾಗಿ ಮತ್ತು ಅವನ್ನು ಬೆಳೆಸುವ ಉದ್ದೇಶಕ್ಕಾಗಿ ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನನಗೆ ಸರ್ಕಾರಿ ಶಾಲೆ ಕೊಡುಗೆ ನೀಡಿದೆ. ನಾನು ದುಡಿದ ಹಣದಲ್ಲಿ ಅಲ್ಪವಾಗಿ ಮಕ್ಕಳಿಗೆ ಮೀಸಲಿಟ್ಟಿದ್ದೇನೆ. ಸರ್ಕಾರಿ ಶಾಲೆಗೆ ಎಷ್ಟು ಮಕ್ಕಳು ದಾಖಲಾದರೂ ಅವರ ಖಾತಗೆ 1000 ರೂ. ಜಮೆ ಮಾಡುತ್ತೇನೆ" ಎಂದು ಸಿದ್ದರಾಮೇಶ್ವರ ಗೌಡ ಹೇಳಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, "ಇವರ ಈ ಕೆಲಸದಿಂದಾಗಿ ನಮಗೆ ಬಹಳ ಸಂತೋಷವಾಗಿದೆ. ಮಕ್ಕಳ ಹೆಸರಿನಲ್ಲಿ ಒಂದು ಸಾವಿರ ರೂ. ಠೇವಣಿ ಮಾಡುವುದರಿಂದ ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಸಿದ್ದಾರೆ" ಎಂದರು.

ಕಾರ್ಯಕ್ಕೆ ಜನರ ಮೆಚ್ಚುಗೆ
ಸಿದ್ದರಾಮೇಶ್ವರ ಗೌಡ ತಮ್ಮ ಬಿಡುವಿನ ವೇಳೆಯಲ್ಲಿ ಪ್ರತಿ ಮನೆಗಳಿಗೆ ತೆರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪೋಷಕರ ಮನವೊಲಿಸುತ್ತಾರೆ. ತಾವು ವಾಸವಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಶಾಲೆಗೆ ಕೂಡುಗೆಯನ್ನು ನೀಡುತ್ತಿದ್ದಾರೆ. ಇವರ ಜಾಗೃತಿ ನೋಡಿ ಈಗಾಗಲೇ 16 ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಸ್ನೇಹಿತರ ಜೊತೆಗೂಡಿ ಬಳ್ಳಾರಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ತಮ್ಮ ಯೋಜನೆಯನ್ನು ಮುಂದುವರಿಸುವ ಕನಸನ್ನು ಸಿದ್ದರಾಮೇಶ್ವರ ಗೌಡ ಹೊಂದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಮುಂದಾಗಿರುವುದು ಶಿಕ್ಷಕರ ಹಾಗೂ ಶಾಲಾ ಆಡಳಿತ ವರ್ಗಕ್ಕೂ ಸಂತಸ ಮೂಡಿಸಿದೆ, ಇವರ ಕಾರ್ಯಕ್ಕೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications