Kannada Sahitya Sammelana: 88ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ
ಬಳ್ಳಾರಿ, ಡಿಸೆಂಬರ್ 22: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ. 88ನೇ ಸಾಹಿತ್ಯ ಸಮ್ಮೇಳನವನ್ನು ಎಲ್ಲಿ ನಡೆಸಬೇಕು? ಎಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ದೆಹಲಿ ಸೇರಿದಂತೆ ಮೂರು ಸ್ಥಳಗಳ ಹೆಸರು ಚರ್ಚೆಗೆ ಬಂದಿತು. ಅಂತಿಮವಾಗಿ ಗಡಿನಾಡು ಬಳ್ಳಾರಿಗೆ ಕನ್ನಡ ಸಾಹಿತ್ಯ ಜಾತ್ರೆ ನಡೆಸುವ ಅವಕಾಶ ಸಿಕ್ಕಿದೆ.
ಶನಿವಾರ ಮಂಡ್ಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಎಲ್ಲಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳವನ್ನು ನಿಗದಿ ಮಾಡಲಾಗಿದೆ. ಆದರೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ.

ಗಡಿನಾಡಿನಲ್ಲಿ ಸಾಹಿತ್ಯ ಜಾತ್ರೆ: ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸುವ ಸ್ಥಳವನ್ನು ಅಂತಿಮಗೊಳಿಸಲಾಗುತ್ತಿದೆ. ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಶನಿವಾರ ಸಾಹಿತ್ಯ ಪರಿಷತ್ ಸಭೆ ನಡೆದಿದೆ.
ಈ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಚಿಕ್ಕಮಗಳೂರು, ನವದೆಹಲಿ ಮತ್ತು ಬಳ್ಳಾರಿಯ ಹೆಸರುಗಳು ಕೇಳಿ ಬಂದವು. ವಿವರವಾಗಿ ಚರ್ಚಿಸಿದ ಬಳಿಕ ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.
ಕಳೆದ ಬಾರಿ ಹಾವೇರಿಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿ ಮಾಡುವಾಗಲೇ ಬಳ್ಳಾರಿಯ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಅಂತಿಮವಾಗಿ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಜಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಸದ್ಯ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಭಾನುವಾರ ಮುಕ್ತಾಯಗೊಳ್ಳಲಿದೆ.
88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ಪಡೆಯುವ ಮೂಲಕ ಬಳ್ಳಾರಿ 68 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಜಾತ್ರೆಯ ಸಾರಥ್ಯ ವಹಿಸಲಿದೆ. 1926, 1938 ಮತ್ತು 1958ರಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.
1958ರಲ್ಲಿ ಬಳ್ಳಾರಿ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿ. ಕೃ. ಗೋಕಾಕ್ ಅಧ್ಯಕ್ಷರಾಗಿದ್ದರು. ಈಗ 68 ವರ್ಷಗಳ ಬಳಿಕ ಪುನಃ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮಂಡ್ಯದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಡಿಸೆಂಬರ್ 20ರ ಶುಕ್ರವಾರ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಭಾನುವಾರ ಸಂಜೆ ಸಮ್ಮೇಳನಕ್ಕೆ ತೆರೆ ಬೀಳಲಿದೆ. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮಂಡ್ಯ ಈ ನಾಡಿನ ಜಾತ್ಯತೀತ, ಸೌಹಾರ್ದ ಪರಂಪರೆಯ ಗಟ್ಟಿ ನೆಲ. ದೇಶದ ಐಕ್ಯತೆ, ಸೌಹಾರ್ದತೆಗಳಿಗೆ ಧಕ್ಕೆಯಾದಾಗಲೆಲ್ಲ ಇಲ್ಲಿ ಜನಿಸಿದ ಮಹಾನ್ ವ್ಯಕ್ತಿಗಳು ಅದರ ವಿರುದ್ಧ ಧ್ವನಿಯೆತ್ತಿದ್ದಾರೆ. ಇಲ್ಲಿ ಕೋಮುವಾದವನ್ನು ಬಿತ್ತಿ, ಸಮಾಜ ಒಡೆಯುವ ಯಾವ ಪ್ರಯತ್ನಗಳು ಯಶಸ್ವಿಯಾಗದು" ಎಂದು ಹೇಳಿದ್ದರು.
ಮೂರು ದಶಕಗಳ ಹಿಂದೆ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಡಾ. ಗೊ. ರು. ಚನ್ನಬಸಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದರು. ಮಂಡ್ಯದಲ್ಲಿ ಈ ಬಾರಿ ನಡೆಯುತ್ತಿರುವ ಸಮ್ಮೇಳನಕ್ಕೆ ಅವರೇ ಅಧ್ಯಕ್ಷರಾಗಿದ್ದಾರೆ. ಮೊಟ್ಟಮೊದಲ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿ ಸಹ ಡಾ. ಗೊ. ರು. ಚನ್ನಬಸಪ್ಪ ಅವರಿಗೆ ಸಲ್ಲುತ್ತದೆ.












Click it and Unblock the Notifications