B. Sriramulu: ಜನಾರ್ದನ ರೆಡ್ಡಿ ನಿವಾಸದ ಗೇಟ್ ಬಂದ್ ಮಾಡಿದ ಗೆಳೆಯ ಶ್ರೀ ರಾಮುಲು
ಬಳ್ಳಾರಿ, ಜನವರಿ 24: ಕರ್ನಾಟಕ ರಾಜಕೀಯದ ಕುಚಿಕು ಗೆಳೆಯರ ಸ್ನೇಹದಲ್ಲಿ ಬಿರುಕು ಮೂಡಿದೆ. ಮಾಜಿ ಸಚಿವ ಬಿ. ಶ್ರೀರಾಮುಲು, ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ನಡುವೆ ವಾಕ್ಸಮರ ನಡೆಯುತ್ತಿದೆ. ಬಳ್ಳಾರಿಯ ರಾಜಕೀಯ ಮತ್ತೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಬಳ್ಳಾರಿಯಲ್ಲಿ ಕೆಲವೇ ಮೀಟರ್‌ಗಳ ದೂರದಲ್ಲಿ ಇಬ್ಬರು ಗೆಳೆಯರ ಮನೆ ಇದೆ. ಆದರೆ ಈಗ ಇಬ್ಬರೂ ಸಹ ಮಾತನಾಡುವ ಸ್ಥಿತಿಯಲ್ಲಿ ಇಲ್ಲ.
ಗುರುವಾರದ ವಾಕ್ಸಮರದ ಬಳಿಕ ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ನಡುವಿನ ದೋಸ್ತಿಯಲ್ಲಿ ಬಿರುಕು ಮೂಡಿದೆ. ಈ ಹಿನ್ನಲೆಯಲ್ಲಿ ಜನಾರ್ದನ ರೆಡ್ಡಿ ಮನೆಯ ಸಂಪರ್ಕಕ್ಕೆ ಇದ್ದ ಗೇಟ್ ಅನ್ನು ಬಿ. ಶ್ರೀರಾಮುಲು ಬಂದ್ ಮಾಡಿಸಿದ್ದಾರೆ.

ಬಳ್ಳಾರಿಯ ಅವಂಬಾವಿಯಲ್ಲಿ ಕೇವಲ 50 ಮೀಟರ್‌ಗಳ ಅಂತರದಲ್ಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರ ಐಷಾರಾಮಿ ಮನೆಗಳಿವೆ. ಸುಪ್ರೀಂಕೋರ್ಟ್ ಒಪ್ಪಿಗೆ ಬಳಿಕ ಈಗ ಜನಾರ್ದನ ರೆಡ್ಡಿ ಈ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಆದರೆ ಬಿ. ಶ್ರೀರಾಮುಲು ಜೊತೆಗಿನ ಸ್ನೇಹದಲ್ಲಿ ಬಿರುಕು ಮೂಡಿದೆ.
ಗೇಟ್ ಬಂದ್ ಮಾಡಿಸಿದ ಬಿ. ಶ್ರೀರಾಮುಲು: ಬಿ. ಶ್ರೀರಾಮುಲು ನಿವಾಸದಿಂದ ಜನಾರ್ದನ ರೆಡ್ಡಿ ನಿವಾಸಕ್ಕೆ ರಸ್ತೆಯಿಂದ ಬರಬಾರದು ಎನ್ನುವ ಕಾರಣಕ್ಕೆ ಬಿ. ಶ್ರೀರಾಮುಲು ನಿವಾಸದ ಕಂಪೌಂಡ್‌ಗೆ ಒಂದು ಗೇಟ್ ಮಾಡಿಸಲಾಗಿತ್ತು. ಈ ಗೇಟ್ ಮೂಲಕ ನೇರವಾಗಿ ಜನಾರ್ದನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಬಹುದಾಗಿತ್ತು.
ಆದರೆ ಗುರುವಾರ ಇಬ್ಬರ ನಡುವೆ ವಾಕ್ಸಮರ ನಡೆದ ಬಳಿಕ ಜನಾರ್ದನ ರೆಡ್ಡಿ ನಿವಾಸಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಗೇಟ್ ಅನ್ನು ಬಿ. ಶ್ರೀರಾಮುಲು ಬಂದ್ ಮಾಡಿದ್ದಾರೆ. ಇಟ್ಟಿಗೆಯಿಂದ ಕಾಪೌಂಡ್ ಗೋಡೆಯನ್ನು ಕಟ್ಟಿ ಗೇಟ್ ತೆರವುಗೊಳಿಸಲಾಗಿದೆ. ಆದರೆ ಈ ಕಾಪೌಂಡ್ ಕಟ್ಟಿರುವುದಕ್ಕೆ ವಾಸ್ತು ಕಾರಣ ಎಂದು ಬಿ. ಶ್ರೀರಾಮುಲು ಹೇಳಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಒಬಬ್ರ ವಿರುದ್ಧ ಒಬ್ಬರು ವಾಗ್ದಾಳಿ ನಡೆಸಿದ್ದರು. "ಶ್ರೀರಾಮುಲು ಕಳೆದ 14 ವರ್ಷಗಳಲ್ಲಿ ಹಲವು ವಿಚಾರಗಳನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತನಾಡಲು ಸಾಕಷ್ಟಿದೆ. ಏಜೆನ್ಸಿಗಳು ತನಿಖೆ ಮಾಡಿದರೆ ಸಾಕಷ್ಟು ಸಂಗತಿ ಬಯಲಾಗುತ್ತದೆ" ಎಂದು ಜನಾರ್ದನ ರೆಡ್ಡಿ ತಿಳಿಸಿದ್ದರು.
"ನಾನು ನನ್ನ ಸ್ನೇಹಿತನಿಗೆ ದ್ರೋಹ ಮಾಡಿದೆ, ಅಪಮಾನ ಮಾಡಿದೆ ಎಂದು ಬಿ. ಶ್ರೀರಾಮುಲು ಬಳ್ಳಾರಿಯ ದೇವಿ ಬಳಿ ಹೋಗಿ ಕಣ್ಣೀರು ಹಾಕಲಿ. ಕರ್ಮ ಯಾರನ್ನೂ ಬಿಡುವುದಿಲ್ಲ. ರಾಮುಲು ನನ್ನ ವಿರುದ್ಧ ಸ್ವಾಮಿ ದ್ರೋಹ, ಆಸ್ತಿ ದ್ರೋಹ ಮತ್ತು ಮಾತೃ ದ್ರೋಹ ಮಾಡಿದ್ದಾರೆ. ನನ್ನ ಕುರಿತು ವೆಬ್ ಸೀರಿಸ್ ಬರುತ್ತಿದೆ. ಅದರಲ್ಲಿ ಬಿ. ಶ್ರೀರಾಮುಲು ಪಾತ್ರವೂ ಇದೆ, ಎಲ್ಲರೂ ನೋಡಿ" ಎಂದು ಜನಾರ್ದನ ರೆಡ್ಡಿ ಹೇಳಿದ್ದರು.
ಜನಾರ್ದನ ರೆಡ್ಡಿ ಆರೋಪಗಳಿಗೆ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದರು. "ನನ್ನನ್ನು ಕ್ರಿಮಿನಲ್ ಎನ್ನುವ ಜನಾರ್ದನ ರೆಡ್ಡಿ ಸಾಚಾನಾ?. ನನ್ನ ಬಳಿ ಅವರ ದಾಖಲೆಗಳಿವೆ, ಅವರ ಕಥೆಯನ್ನು ಎರಡು ಮೂರು ಎಪಿಸೋಡ್ ಕಥೆಗಳಲ್ಲಿ ಹೇಳಿ ಬಿಡಬಲ್ಲೆ, ಅವರ ಎಲ್ಲಾ ಕೃತ್ಯದ ದಾಖಲೆಗಳಿವೆ" ಎಂದು ತಿಳಿಸಿದ್ದರು.
"ಜನಾರ್ದನ ರೆಡ್ಡಿ ಅವರದ್ದು ಎಲ್ಲರನ್ನೂ ಮುಗಿಸುವ ಮನಸ್ಥಿತಿ. ಅವರಿಂದ ನಾನು ಬೆಳೆಯಲು ಆಗದು, ಅವರಿಂದ ಬೆಳೆದೆ ಎಂದರೆ ಜನರು ನಂಬುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮೋದಿ ಪ್ರಧಾನಿಯಾಗಿದ್ದು, ಮುಂದೆ ಬಿಜೆಪಿ ಸರ್ಕಾರ ಬರುವುದು ನನ್ನಿಂದಲೇ ಎಂದು ಜನಾರ್ದನ ರೆಡ್ಡಿ ಹೇಳುತ್ತಾರೆ" ಎಂದು ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದರು.












Click it and Unblock the Notifications