ಕೇವಲ ಪಟ್ಟಣ, ಬ್ರಾಹ್ಮಣ ಪಕ್ಷವಾಗಿದ್ದ ಬಿಜೆಪಿಯನ್ನು ಸರ್ವವ್ಯಾಪಿ ಮಾಡಿದ್ದು ಬಿಎಸ್‌ವೈ: ಮುತಾಲಿಕ್
ಬಾಗಲಕೋಟೆ, ಜುಲೈ 23: ಶಿಕಾರಿಪುರ ಕ್ಷೇತ್ರವನ್ನು ತಮ್ಮ ಕಿರಿಯ ಮಗ ಬಿವೈ ವಿಜಯೇಂದ್ರನಿಗೆ ಬಿಟ್ಟುಕೊಟ್ಟು, ಚುನಾವಣಾ ರಾಜಕೀಯದಿಂದ ಬಹುತೇಕ ಹಿಂದೆ ಸರಿದಿರುವ ಬಿಎಸ್ ಯಡಿಯೂರಪ್ಪರನ್ನು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಡಿ ಹೊಗಳಿದ್ದಾರೆ. ಬಿಜೆಪಿ ಒಂದು ಕಾಲದಲ್ಲಿ ಪಟ್ಟಣದ ಜನರಿಗೆ, ಬ್ರಾಹ್ಮಣರಿಗೆ, ವಿದ್ಯಾವಂತರಿಗೆ ಮಾತ್ರ ಎಂಬಂತಿತ್ತು, ಅದನ್ನು ರಾಜ್ಯದಲ್ಲಿ ಸರ್ವವ್ಯಾಪಿ ಮಾಡಿದ್ದು ಯಡಿಯೂರಪ್ಪ ಎಂದು ಪ್ರಶಂಸಿಸಿದ್ದಾರೆ.
ಕೆರೂರು ಕೋಮುಗಲಭೆಯಲ್ಲಿ ಗಲಭೆಯಲ್ಲಿ ಗಾಯಗೊಂಡಿದ್ದ ಹಿಂದೂ ಕಾರ್ಯಕರ್ತರನ್ನು ಭೇಟಿಯಾಗಿ ಧೈರ್ಯ ತುಂಬಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಪುತ್ರನಿಗೆ ಕ್ಷೇತ್ರಬಿಟ್ಟುಕೊಟ್ಟ ವಿಷಯದ ಬಗ್ಗೆ ಮಾತನಾಡಿ, "ಯಡಿಯೂರಪ್ಪ ಬಿಜೆಪಿಯನ್ನು ದೊಡ್ಡಮಟ್ಟದಲ್ಲಿ ಕಟ್ಟಿ ಬೆಳೆಸಿದ ಶ್ರೇಷ್ಟ ವ್ಯಕ್ತಿ, ಬಿಜೆಪಿ ಅಂದರೆ ಕೇವಲ ಪಟ್ಟಣ, ಬ್ರಾಹ್ಮಣರ ಪಕ್ಷ, ಕೇವಲ ಉನ್ನತ ವರ್ಗದ ವಿದ್ಯಾವಂತ ಜನರಿಗೆ ಎಂಬಂತಿತ್ತು. ಅದನ್ನು ಸರ್ವವ್ಯಾಪಿವಾಗಿ ಬೆಳೆಸಿದಂತ ವ್ಯಕ್ತಿ ಯಡಿಯೂರಪ್ಪ, ಆದರೆ ನಾನು ನೋವಿನಿಂದ, ದುಃಖದಿಂದ ಹೇಳುತ್ತಿದ್ದೇನೆ, ಅವರು ತಮ್ಮ ಮಗನ ಸಲುವಾಗಿ ಎಲ್ಲೋ ಒಂದು ಕಡೆ ಎಡವುತ್ತಿದ್ದಾರೇನೋ ಅನಿಸುತ್ತಿದೆ," ಎಂದು ಹೇಳಿದರು.
ಯಡಿಯೂರಪ್ಪರನ್ನು ಹೈಕಮಾಂಡ್ ಕಡೆಗಣಿಸುತ್ತಿದಿಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಅದು ಪಕ್ಷದ ನಿರ್ಣಯ, ಅವಾಗವಾಗ ಏನೇನೊ ನಿರ್ಣಯ ತಗೋತಾರೆ, ಕುಟುಂಬದವರಿಗೆ ಆದ್ಯತೆ ಕೊಡೋದಿಲ್ಲ ಅಂತಿದ್ರು, ಅಂಗಡಿ ಪತ್ನಿ ಅವರಿಗೆ ಕೊಟ್ರು, ವಯಸ್ಸಿನ ಆಧಾರ ಮಾನದಂಡ ಹೇಳಿದ್ರು, ಆದರೆ ಹೊರಟ್ಟಿಯವರಿಗೆ ಪರಿಷತ್ ಟಿಕೆಟ್ ಕೊಟ್ಟರು, ಅವರಿಗೆ ಒಟ್ಟು ಗೆಲ್ಲಬೇಕು ಅಷ್ಟೆ. ಅಲ್ಲಿ ಯಾವುದೇ ನಿಯಮ, ಸಿದ್ದಾಂತವಿಲ್ಲ, ಗೆಲ್ಲುವವರು 80 ವರ್ಷದ ಮುದುಕನಾದ್ರು ಟಿಕೆಟ್ ಕೊಡ್ತಾರೆ. ಗೆಲ್ಲುವಂತಿದ್ದರೆ ಸೋನಿಯಾ ಗಾಂಧಿಗೂ ಕೊಡ್ತಾರೆ. ಈಗ ಬಿಜೆಪಿಯಲ್ಲಿ 70 ಪರ್ಸೆಂಟ್ ಕಾಂಗ್ರೆಸ್, ಜೆಡಿಎಸ್ ಅವರೇ ಇದ್ದಾರೆ. ಕಮ್ಯುನಿಸ್ಟ್ ನವರು ಒಳಹೊಕ್ಕಿದಾರೆ. ಇವರಿಗೆ ಅಧಿಕಾರ ಅಷ್ಟೇ ಮುಖ್ಯವಷ್ಟೇ," ಎಂದು ಕಿಡಿಕಾರಿದರು.

ಕೆರೂರು ಗಲಭೆ ರಾಕ್ಷಸಿ ಕೃತ್ಯ
ಕೆರೂರು ಘರ್ಷಣೆ ವಿಚಾರವಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್ , ಕೆರೂರು ನಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯವಾದದ್ದು. ಒಂದು ಹಿಂದೂ ಹುಡುಗಿಯನ್ನು ಚುಡಾಯಿಸಿದರೆ ಎಂಬ ವಿಚಾರಕ್ಕೆ ನಡೆದಂತಹ ಗಲಾಟೆ ಅದು, ಪೊಲೀಸರು ಸಂಧಾನ ಮಾಡಿದ ನಂತರವೂ ಈ ಘಟನೆ ನಡೆದಿದೆ. ಇದೊಂದು ರಾಕ್ಷಸಿ ಕೃತ್ಯ. ನಾನು ಮುಸ್ಲಿಂ ಕಿಡಿಗೇಡಿಗಳಿಗೆ, ಗೂಂಡಾಗಳಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಹುಷಾರಾಗಿರಿ ನಿಮ್ಮ ಪಾಡಿಗೆ ನೀವಿರಿ,ಇನ್ಮೇಲೆ ಈ ರೀತಿ ಆಟ ನಡೆಯುವುದಿಲ್ಲ, ನೆನಪಿಟ್ಟುಕೊಳ್ಳಿ ಎಂದು ಹೇಳಿದರು.

ಚಾಕು-ಚೂರಿ ಹಿಡಿದು ಹಲ್ಲೆ ಮಾಡಲು ತಾಲೀಬಾನ್ ಅಲ್ಲ
ನಾನು ಈಗ ಗೋಪಾಲ ದಾಸಮನಿ ಎಂಬ ಯುವಕನನ್ನು ವಿಚಾರಣೆ ಮಾಡಿದ್ದೇನೆ, ಎಂಟು ಜನ ಬಂದು ಕಣ್ಣಲ್ಲಿ ಕಾರದ ಪುಡಿ ಹಾಕಿ ಹಲ್ಲೆ ಮಾಡಿದರು ಎಂದು ಹೇಳಿದ್ದಾನೆ. ಸುದೈವದಿಂದ, ವೈದ್ಯರ ಕಾಳಜಿಯಿಂದ ಆತ ಬದುಕಿದ್ದಾನೆ. ಅವನನ್ನು ಕೊಲೆ ಮಾಡುವುದಕ್ಕಾಗಿಯೇ ಅವರು ಬಂದಿದ್ದರು. ಸತ್ತಿದ್ದಾನೆಂದು ಅಲ್ಲಿಂದ ಓಡಿ ಹೋಗಿದ್ದಾರೆ. ಈ ರೀತಿಯ ಪ್ರವೃತ್ತಿ ಮುಸ್ಲಿಮರಿಗೆ ಸರಿಯಲ್ಲ. ಚಾಕು ಚೂರಿಯಿಂದ ಹೊಡೆಯುವುದಕ್ಕೆ ಇದೇನು ತಾಲಿಬಾನ್, ಪಾಕಿಸ್ತಾನ್ ಅಲ್ಲ. ಡಾಕ್ಟರ್ ಅಂಬೇಡ್ಕರ್ ಅವರ ಕ್ಷೇತ್ರದ ಸಂವಿಧಾನದ ಆಧಾರದ ಮೇಲೆ ನಮ್ಮ ದೇಶ ನಡಿತಾ ಇದೆ. ಈಗ ಹಿಂದೂ ಸಮಾಜ ತಾಳ್ಮೆಗೆಟ್ಟಿದೆ. ಹಿಂದು ಸಮಾಜ ಜಾಗೃತವಾಗಿದೆ, ಅವರೇ ನಿಮಗೆ ಉತ್ತರ ಕೊಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪಿಎಫ್ಐ -ಎಸ್‌ಡಿಪಿಐ ನಿಷೇಧಿಸಲು ಮನವಿ
ಎಸ್‌ಡಿಪಿಐ, ಪಿಎಫ್‌ಐ ಕ್ಯಾನ್ಸರ್ ಇದ್ದ ಹಾಗೆ, ಇವರು ದೇಶದ್ರೋಹಿಗಳು, ಟೆರರಿಸ್ಟ್‌ಗಳು. ದೇಶದ ಎಲ್ಲ ರಾಜ್ಯಗಳಿಗೆ ವ್ಯಾಪಿಸಿದ್ದಾರೆ. ಈ ಬಗ್ಗೆ ದಾಖಲೆ ನನ್ನ ಬಳಿ ಇವೆ. ಬಿಜೆಪಿಯವರೆ ಕೇಂದ್ರಕ್ಕೆ ಹೋಗಿ ಬ್ಯಾನ್ ಮಾಡಲು ಮನವಿ ಸಲ್ಲಿಸಬೇಕು . ರಾಜ್ಯದಲ್ಲಿ, ಕೇಂದ್ರದಲ್ಲಿ ಇವರದ್ದೆ ಸರ್ಕಾರ ಇದ್ದಾಗ ಬಾಯಿ ಮುಚ್ಚಿಕೊಂಡಿದ್ದಾರೆ. ಆ ಸಂಘಟನೆಗಳು ಕೊಲೆ ದಂಗೆಗಳನ್ನು ಮಾಡುತ್ತಿದ್ದಾರೆ. ಇದು ನಿಮಗೆ ಗೊತ್ತಾಗ್ತಿಲ್ವಾ, ನೀವು ವಿರೋಧ ಪಕ್ಷದಲ್ಲಿದ್ದಾಗ ನಿಷೇಧಿಸಿ ಎಂದು ಹೇಳುತ್ತಿದ್ರಿ, ಈಗ ನಿಮ್ಮ ಸರ್ಕಾರವಿದೆ ಬ್ಯಾನ್ ಮಾಡಿ.
ಕಾಂಗ್ರೆಸ್ ಇಲ್ಲಿವರೆಗೂ ಇಂಥವರನ್ನು ಬೆಳೆಸಿ ಬಿಟ್ಟಿದೆ, ಕಾಂಗ್ರೆಸ್‌ಗೆ ಮತ ಬ್ಯಾಂಕ್ ಅಂದರೆ ಮುಸ್ಲಿಮರು, ಇವತ್ತು ಕಾಂಗ್ರೆಸ್ ಓಟ್ ಬ್ಯಾಂಕನ್ನು ಎಸ್‌ಡಿಪಿಐ ಒಡೆಯುತ್ತಿದೆ. ಇದು ಬಿಜೆಪಿ ಅವರು ತಮಗೆ ಲಾಭ ಆಗುತ್ತೆ ಅಂದುಕೊಂಡಿದ್ದಾರೆ. ಆದರೆ ಇದು ಭ್ರಮೆ, ನಿಮ್ಮ ಅಧಿಕಾರಕ್ಕಾಗಿ ಹಿಂದುತ್ವವನ್ನು ನಾಶ ಮಾಡುವುದರ ಜೊತೆಗೆ ಪಿಎಫ್‌ಐ,ಎಸ್‌ಡಿಪಿಐ ಬೆಳೆಸಬೇಡಿ. ನಿಮಗೆ ನಾಚಿಕೆ ಮಾನ ಮರ್ಯಾದೆ ,ದೇಶದ ಬಗ್ಗೆ ಕಾಳಜಿ ಇದ್ದರೆ ಅವುಗಳನ್ನು ನಿಷೇಧಿಸಿ ಎಂದು ತಿಳಿಸಿದ್ದಾರೆ.

ಹೆಂಡ್ತಿ-ಮಕ್ಕಳ ಜೊತೆ ಮಾತಾಡಿಕೊಂಡು ಆರಾಮವಾಗಿದ್ದಾರೆ
ಹಿಂದೂಗಳ ರಕ್ಷಣೆಯಿಲ್ಲ ರಾಜ್ಯ ಸರ್ಕಾರ ವಿಫಲವಾಗಿದೆ. ಹರ್ಷನ ಕೊಲೆ ಬಳಿಕ ಮತ್ತೆ ಐದು ಬಾರಿ ಹಿಂದೂಗಳ ಮೇಲೆ ಹಲ್ಲೆಯಾಗಿದೆ, ಶಿವಮೊಗ್ಗ ಕೋಟೆ ಹೊಕ್ಕಿ ಹೊಡೆಯುತ್ತಿದ್ದಾರೆ. ಶಿವಮೊಗ್ಗ ಮಾಜಿ ಸಿಎಂ, ಹಾಲಿ ಗೃಹ ಮಂತ್ರಿ ಜಿಲ್ಲೆ, ಎಲ್ಲಿರುವ ಎಲ್ಲಾ ಶಾಸಕರು ಬಿಜೆಪಿಯವರೆ. ಆದರೂ ಸರಕಾರ ಇಂತಹ ದುರ್ಗಟನೆ ತಡೆಯುವಲ್ಲಿ ವಿಫಲವಾಗಿದೆ ಎಂದರೆ ಏನರ್ಥ? ಎಂದು ಮುತಾಲಿಕ ಆಕ್ರೋಶ ಹೊರಹಾಕಿದರು.
ಹರ್ಷಾ ಹಂತಕರು ಜೈಲಿಂದಲೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ-ಮಕ್ಕಳ ಜೊತೆಗೆ ಮಾತನಾಡುತ್ತಾರೆ ಎಂದರೆ, ಇದು ಎಂಥಹ ವ್ಯವಸ್ಥೆ , ಜೈಲು ಲಾಡ್ಜಿಂಗ್ ಆಂಡ್ ಬೋರ್ಡಿಂಗ್ ಆಗಿದೆ. ಇದು ಹರ್ಷನ ತಾಯಿಗೆ ಹೇಗೆ ಆಗಿರಬಹುದು, ಮಗನ ಕೊಲೆ ಮಾಡಿದವರು ಜೈಲಿಂದ ಆನಂದದಿಂದ ಮಾತಾಡಿಕೊಂಡಿದ್ದಾರೆಂದರೆ , ಆ ತಾಯಿಗೆ ಹೇಗೆ ಆಗಿರಬೇಡ. ಅದೇ ಜೈಲಿನಲ್ಲಿ ಪಾಕಿಸ್ತಾನಿಗಳಿದ್ದಾರೆ, ಟೆರರಿಸ್ಟ್ ಇದ್ದಾರೆ. ಮುಸ್ಲಿಂ ಗೂಂಡಾಗಳಿದ್ದಾರೆ. ಅವರು ಕೂಡ ಪಾಕಿಸ್ತಾನದವರ ಜೊತೆಗೆ ಹೀಗೆ ಮಾತನಾಡಿಕೊಂಡಿರಬಹುದು ಅಲ್ವಾ ಎಂದು ಮುತಾಲಿಕ ಆಕ್ರೋಶ ಹೊರಹಾಕಿದರು.












Click it and Unblock the Notifications