ಲಿಂಗಾಯತ ಸಿಎಂ: ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡುವುದಿಲ್ಲ ಎಂದು ಭವಿಷ್ಯ ನುಡಿದ ಎಚ್‌ಡಿ ಕುಮಾರಸ್ವಾಮಿ
ಬಾಗಲಕೋಟೆ, ಮೇ. 01: ಲಿಂಗಾಯತ ಸಿಎಂ ವಿವಾದ ಈಗ ಮತ್ತೆ ಮುನ್ನಲೆಗೆ ಬಂದಿದೆ. ಭಾರತೀಯ ಜನತಾ ಪಕ್ಷವು ಯಾವುದೇ ಕಾರಣಕ್ಕೂ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯತೀತ ಜನತಾ ದಳದ ನಾಯಕ ಎಚ್‌ಡಿ ಕುಮಾರಸ್ವಾಮಿ ಸೋಮವಾರ ಭವಿಷ್ಯ ನುಡಿದಿದ್ದಾರೆ.
ಸೋಮವಾರ ಬಾದಾಮಿಯಲ್ಲಿ ಪಕ್ಷದ ಅಭ್ಯರ್ಥಿ ಹನುಮಂತ ಮಾವಿನಮರದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ. ಜನರನ್ನುದ್ದೇಶಿಸಿ ಮಾತನಾಡಿದ ಎಚ್ ಡಿ. ಕುಮಾರಸ್ವಾಮಿ, "ನಾನು ಈ ಹಿಂದೆಯೇ ಹೇಳಿದ್ದೇನೆ. ಬಿಜೆಪಿಯವರು ಲಿಂಗಾಯತರನ್ನು ಸಿಎಂ ಮಾಡುವುದಿಲ್ಲ, ವಾಸ್ತವವಾಗಿ, ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಲು ತೆರೆಮರೆಯಲ್ಲಿ ಸಾಕಷ್ಟು ಕೆಲಸ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಮೊದಲೇ ಲಿಂಗಾಯಿತ ಸಿಎಂ ಮತ್ತು ಬ್ರಾಹ್ಮಣ ಸಿಎಂ ವಿವಾದವನ್ನು ಹುಟ್ಟುಹಾಕಿದ್ದು ಎಚ್.ಡಿ ಕುಮಾರಸ್ವಾಮಿ. ಬ್ರಾಹ್ಮಣ ಸಮುದಾಯದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಈ ಹಿಂದೆ ಹೇಳಿದ್ದರು. ಬಳಿಕ ಇದು ಹಲವು ವಿವಾದಕ್ಕೆ ಕಾರಣವಾಗಿತ್ತು.
ಮತ್ತೆ ಈ ಬಗ್ಗೆ ತಮ್ಮ ಮಾತು ಸರಿ ಎಂದಿರುವ ಅವರು ಕಮಲ ಪಾಳಯ ಮತ್ತೆ ಲಿಂಗಾಯತ ಸಮುದಾಯದವರನ್ನು ಸಿಎಂ ಮಾಡುವುದಿಲ್ಲ. ಬ್ರಾಹ್ಮಣರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಮೇಲೆ ಹರಿಹಾಯ್ದಿರುವ ಅವರು, ಜನರ ನಿಜವಾದ ಸಮಸ್ಯೆಗಳ ಬದಲಾಗಿ ಹಾವು ಮತ್ತು ವಿಷಕನ್ಯೆಯಂತಹ ವಿಷಯಗಳನ್ನು ಚರ್ಚಿಸಲಾಗುತ್ತಿದೆ ಎಂದು ಜೆಡಿಎಸ್ ನಾಯಕ ಹೇಳಿದ್ದಾರೆ.
"ರಾಜ್ಯದಲ್ಲಿನ ನಾನಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಬದಲು ಹಾವು, ವಿಷಕನ್ಯೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಇಂತಹ ರಾಜಕಾರಣದ ಅವಶ್ಯಕತೆ ಇಲ್ಲ, ಇವುಗಳಿಂದ ಜನಜೀವನ ಸುಧಾರಿಸುತ್ತದೆಯೇ..?. ಪ್ರಧಾನಿ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡಿದರು. ಆದರೆ, ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ಏಕೆ ನಿಲ್ಲಿಸಲಿಲ್ಲ ಎಂದು ಅವರನ್ನು ನಾನು ಕೇಳುತ್ತೇನೆ, ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ" ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
"ಪಿಎಂ ಮೋದಿಯವರು ಜೆಡಿಎಸ್‌ಗೆ ಕಾಂಗ್ರೆಸ್‌ನ ಬಿ ಟೀಮ್ ಎಂದು ಕರೆಯುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಅನ್ನು ಬಿಜೆಪಿ ಬಿ ಟೀಮ್ ಎಂದು ಕರೆಯುತ್ತಾರೆ. ಆದರೆ, ನಾವು ದೇಶದ ಜನರು ಮತ್ತು ಕನ್ನಡಿಗರ ಪಕ್ಷ" ಎಂದು ರಾಷ್ಟ್ರೀಯ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ಕ್ಕೆ ಕೊನೆಗೊಳ್ಳಲಿದೆ. ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications