ಕರ್ನಾಟಕದತ್ತ ಸೋನಿಯಾ, ರಾಹುಲ್ ವಿಶೇಷ ಗಮನ

ನಾಡಿನ ಮತದಾರ ಪ್ರಭುಗಳಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಸೋನಿಯಾ ಗಾಂಧಿ ಉಪಸ್ಥಿತಿಯಲ್ಲಿ ಬೃಹತ್ ಸಮಾರಂಭವೊಂದನ್ನು ನಡೆಸಿ, ಲೋಕಸಭೆ ಚುನಾವಣೆ ತಯಾರಿಗೆ ಕಾರ್ಯಕರ್ತರನ್ನು ಹಿರಿದುಂಬಿಸುವುದು ಸೋನಿಯಾ ಗಾಂಧಿ ಭೇಟಿಯ ಆಶಯವಾಗಿದೆ.
ಅದಕ್ಕೂ ಮುನ್ನ ಅಷ್ಟೇನೂ ಮಹತ್ವದ್ದಲ್ಲದ ಆದರೆ ರಾಜಕೀಯ ಜಿದ್ದಾಜಿದ್ದಿಯಿಂದ ಕೂಡಿರುವ ಉಪಚುನಾವಣೆ ನಡೆಯಲಿದೆ. ತನ್ನಿಮಿತ್ತ ಪ್ರಚಾರ ಕಾರ್ಯವೂ ನೆರವೇರುತ್ತದೆ ಎಂಬ ಲೆಕ್ಕಾಚಾರದಲ್ಲಿ ಸೋನಿಯಾರನ್ನು ಆಗಸ್ಟ್ 21 ರೊಳಗಾಗಿ ಕರೆತರುವ ಆಲೋಚನೆಯೂ ರಾಜ್ಯ ಕೆಪಿಸಿಸಿ ನಾಯಕರದ್ದಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರು ಭಾನುವಾರ ಭೇಟಿ ನೀಡಿ, ಮಾತುಕತೆ ನಡೆಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿ ಸ್ಥಾನಗಳನ್ನು ತಂದುಕೊಟ್ಟ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುವುದು ಸಮಂಜಸವಾಗುತ್ತದೆ.
ಅದು ಸೋನಿಯಾ ಅವರ ಸಮ್ಮುಖದಲ್ಲಿ ನೆರವೇರಿದರೆ ಉತ್ತಮವಾಗಿರುತ್ತದೆ. ಇದು ಲೋಸಕಭೆ ಚುನಾವಣೆ ತಯಾರಿ ವಿಚಾರದಲ್ಲಿ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಿಸಲಿದೆ ಎಂದು ಆಲೋಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಗಮನಾರ್ಹವೆಂದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರ ಪುತ್ರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೂ ಕರ್ನಾಟಕದ ನಾಯಕರ ಜತೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ರಾಜ್ಯ ರಾಜಕೀಯ ವಿದ್ಯಮಾನಗಳು, ಪಕ್ಷ ನತ್ತು ಸರಕಾರದ ನಡುವಿನ 'ಸಮನ್ವಯ' ಗೊಂದಲ, ಮುಂದಿನ ಲೋಕಸಬೇ ಚುನಾವಣೆ ತಯಾರಿ ಸಂಬಂಧ ಚರ್ಚಿಸಲು ಕಾಂಗ್ರೆಸ್ಸಿನ ಯುವ ನಾಯಕ ರಾಹುಲ್ ಆಗಸ್ಟ್ 25ರಂದು ದಿಲ್ಲಿಯಲ್ಲಿ ಈ ಸಭೆ ಕರೆದಿದ್ದಾರೆ.












Click it and Unblock the Notifications