ಮಂಗಳೂರು ಮಳೆ: ನಸುಕಿನಲ್ಲಿ ನಾಲ್ವರ ದುರ್ಮರಣ

ಮಂಗಳೂರು ಸುತ್ತಮುತ್ತ ನಾಲ್ಕಾರು ದಿನಗಳಿಂದ ಒಂದೇ ಸಮನೆ ಮಳೆಯಾಗುತ್ತಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡು, ಜನ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಇಂದು ಮಂಗಳವಾರ ಬೆಳಗ್ಗೆ ಭೂಕುಸಿತ ಉಂಟಾಗಿ ಒಂದೇ ಕುಟಂಬದ ನಾಲ್ವರು ಮೃತಪಟ್ಟಿದ್ದಾರೆ.
ಈ ದುರ್ದೈವಿಗಳು ನೆಲೆಸಿದ್ದ ಪುಟ್ಟ ಮನೆಯ ಮೇಲೆ ಇಂದು ಬೆಳಗ್ಗೆ ದೊಡ್ಡ ಕಲ್ಲುಬಂಡೆಯೊಂದು ಉರುಳಿಬಿದ್ದ ಪರಿಣಾಮ ನಾಲ್ವರೂ ನಸುಕಿನಲ್ಲಿ ಅಸುನೀಗಿದ್ದಾರೆ.
ಮೃತರನ್ನು ಸುಂದರಿ (55), ಸುಂದರ್ (58), ಬೇಬಿ (45) ಮತ್ತು ಚೈತ್ರಾ (14) ದುರಂತದಲ್ಲಿ ಮೃತಪಟ್ಟವರು. ಬಜ್ಪೆಯ ತೊಟ್ಟಿಲುಗುಂಡಿ ಸಮೀಪ ಈ ದುರಂತ ಸಂಭವಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಮತ್ತು ಗೃಹ ಸಚಿವ ಜಾರ್ಜ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಪ್ರಕಾಶ್ ಅವರಿಗೆ ಸಾಥ್ ನೀಡಿದ್ದಾರೆ. ಈ ಮಧ್ಯೆ ಮಳೆ ಆರ್ಭಟ ಇನ್ನೂ ಮುಂದುವರಿದಿದೆ. ಗುಡ್ಡದ ಮೇಲೆ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವುದೇ ಈ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ತೊಟ್ಟಿಲುಗುಡಿ ಗ್ರಾಮದಲ್ಲಿ ಸಂಭವಿಸಿದ ದುರಂತಕ್ಕೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಿದ್ದು, ಮೃತಪಟ್ಟವರಿಗೆ ತಲಾ 1.5 ಲಕ್ಷ ರೂಪಾಯಿಯಂತೆ ಪರಿಹಾರ ಮೊತ್ತವನ್ನು ಅವರ ಕುಟುಂಬದವರಿಗೆ ನೀಡಲಾಗುವುದು ಎಂದು ಘೋಷಿಸಿದೆ.
ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ದುರಂತದ ಸುದ್ದಿ ತಿಳಿದು ಶೀಘ್ರ ಪರಿಹಾರ ಕಾರ್ಯಕ್ಕೆ ಸೂಚಿಸಿದ್ದಾರೆ. ಇದೇ ವೇಳೆ 12 ಮನೆಗಳನ್ನು ಸ್ಥಳಾಂತರ ಮಾಡುವಂತೆಯೂ ಆದೇಶಿಸಿದ್ದಾರೆ.












Click it and Unblock the Notifications