ಹುಬ್ಬಳ್ಳಿ ಕಿಮ್ಸ್ ಅವ್ಯವಸ್ಥೆ ಕಂಡು ಲಾಡ್ ಕೆಂಡಾಮಂಡಲ

1957ರಲ್ಲಿ ಸ್ಥಾಪನೆಯಾಗಿ ಅರ್ಧಶತಮಾನಕ್ಕೂ ಹೆಚ್ಚು ವರ್ಷಗಳ ಕಾಲ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿರುವ ಹುಬ್ಬಳ್ಳಿಯ ಕಿಮ್ಸ್ (ಕೆಎಂಸಿ) ಆಸ್ಪತ್ರೆಯ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದವರು ಧಾರವಾಡ ಜಿಲ್ಲಾ ಉಸ್ತುವಾರಿ ವಹಿಸಿರುವ, ಸಂಪನ್ಮೂಲ ಅಭಿವೃದ್ಧಿ ಹಾಗು ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾಗಿರುವ ಕಲಘಟಗಿ ಶಾಸಕ ಸಂತೋಷ್ ಹಾಡ್ ಅವರು.
ಶುಕ್ರವಾರ ಬೆಳಗಿನ ಜಾವ ಧಾರವಾಡದ ಇಟ್ಟಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವವರನ್ನು ಭೇಟಿ ಮಾಡಲು ಶನಿವಾರ ಬೆಳಿಗ್ಗೆ 8.30ಕ್ಕೆ ಬಂದಾಗ ಆಸ್ಪತ್ರೆಯ ಗಬ್ಬೆದ್ದುಹೋದ ವ್ಯವಸ್ಥೆಯನ್ನು ಕಂಡು ಸಂತೋಷ್ ಲಾಡ್ ಕೆಂಡಾಮಂಡಲವಾದರು.
ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್ಸ್) ನಿರ್ದೇಶಕಿ ಡಾ. ವಸಂತಾ ಕಾಮತ್ ಅವರನ್ನು ಸೇರಿ, ವೈದ್ಯರು, ನರ್ಸ್‌ಗಳು, ಆಡಳಿತಾಧಿಕಾರಿಗಳು, ಗುತ್ತಿಗೆದಾರರನ್ನು ಸೇರಿಸಿಕೊಂಡು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಈ ತರಹ ವ್ಯವಸ್ಥೆಯಿದ್ದರೆ ರೋಗಿಗಳು ಹೇಗೆ ಗುಣಮುಖವಾಗಬೇಕು. ಗುಣಮುಖವಾಗುವ ಬದಲು ಇಲ್ಲಿಯ ಅವ್ಯವಸ್ಥೆ ನೋಡಿಯೇ ಸತ್ತುಹೋಗುತ್ತಾರೆ ಎಂದು ಹಿಗ್ಗಾಮುಗ್ಗಾ ಝಾಡಿಸಿದರು.
ಸಂತೋಷ್ ಲಾಡ್ ಅವರ ಪ್ರಶ್ನೆಗಳಿಗೆ ಅಲ್ಲಿ ಯಾರ ಬಳಿಯೂ ಉತ್ತರವಿರಲಿಲ್ಲ. ಉತ್ತರ ಹೇಳಲು ಬಂದವರ ಮತ್ತಷ್ಟು ಬಣ್ಣಗಳು ಬಯಲಾಗುತ್ತಿದ್ದವು. ಡಾ. ವಸಂತಾ ಕಾಮತ್ ಅವರು ಅಲ್ಲಲ್ಲಿ ಬಿದ್ದಿದ್ದ ವಸ್ತುಗಳ ಬಗ್ಗೆ ಸಬೂಬು ಹೇಳಲು ಬಂದಾಗ, "ರೀ ಕಾಮನ್ ಸೆನ್ಸ್ ಇದೆಯೇನ್ರೀ ನಿಮಗೆ" ಎಂದು ಕೋಪೋದ್ರಿಕ್ತರಾಗಿ ಅವರ ಕೈಯಿಂದಲೇ ಅವನ್ನೆಲ್ಲ ಎತ್ತಿಸಿದರು. ನಿರ್ದೇಶಕಿ ಮರುಮಾತಿಲ್ಲದೆ ಚಾಕರಿ ಮಾಡಬೇಕಾಯಿತು.
ಗುತ್ತಿಗೆದಾರರನ್ನು ಹಿಡಿದುಕೊಂಡು, ಯಾರ್ರೀ ನಿಮಗೆ ಗುತ್ತಿಗೆ ಕೊಟ್ಟಿದ್ದು, ಹೀಗೇ ಏನ್ರೀ ಕೆಲಸ ಮಾಡೋದು, ಈ ರೀತಿನಾ ಆಸ್ಪತ್ರೆ ನೋಡಿಕೊಳ್ಳೋದು, ಇದು ಹೀಗೇ ಮುಂದುವರಿದರೆ ನಿಮ್ಮ ಗುತ್ತಿಗೆಯನ್ನು ಕಿತ್ತುಕೊಳ್ಳಬೇಕಾಗುತ್ತದೆ ಎಂದು ಗುತ್ತಿಗೆದಾರರ ಬೆವರು ಇಳಿಸಿದರು. ಇನ್ನು ಮುಂದಾದರೂ ಆಸ್ಪತ್ರೆಯನ್ನು ಚೆನ್ನಾಗಿ ಇಟ್ಟುಕೊಳ್ಳಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಎಂದು ಸಂತೋಷ್ ಲಾಡ್ ಮಂಗಳಾರತಿ ಮಾಡಿದರು.












Click it and Unblock the Notifications