ಮತ ಹಾಕೋದೆ ಕಷ್ಟ ಅಂಥಾದ್ದರಲ್ಲಿ ಈ ರಗಳೆ ಯಾಕೆ?
ಬೆಂಗಳೂರು ಏ.1: ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ಅವಧಿಯನ್ನು ಒಂದು ಗಂಟೆ ಕಡಿತಗೊಳಿಸಲಾಗಿದೆ. ಇದುವರೆಗೂ ಚುನಾವಣೆ ದಿನದಂದು ಒಟ್ಟು 10 ಗಂಟೆ ಕಾಲ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈಗ ಅದಕ್ಕೆ ಒಂದು ಗಂಟೆ ಬ್ರೇಕ್ ಬಿದ್ದಿದೆ.
ಇದು ಕೇಂದ್ರ ಚುನಾವಣಾ ಆಯೋಗದ ದಿಢೀರ್ ನಿರ್ಧಾರ. ಯಾವುದೇ ರಾಜಕೀಯ ಪಕ್ಷದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಇಂತಹ ನಿರ್ಣಯ ತೆಗೆದುಕೊಂಡಿದೆ. ಬೆಳಗಿನ ಅವಧಿಯಲ್ಲಿ ಹೀಗೆ ಒಂದು ಗಂಟೆ ಮತದಾನ ಸಮಯ ಕಡಿತಗೊಳಿಸಿರುವುದಕ್ಕೆ ರಾಜ್ಯದ ಚುನಾವಣೆ ಆಯೋಗದ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ.
'ಸಿಇಸಿ ಯಾವ ಉದ್ದೇಶದಿಂದ ಒಂದು ಗಂಟೆ ಕಡಿತ ಮಾಡಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಏ. 9ರಂದು ದಿಲ್ಲಿಯಿಂದ ಬರಲಿರುವ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು' ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದ್ದಾರೆ.

ಮತದಾನದ ಅವಧಿಯನ್ನು ಕಡಿತಗೊಳಿಸುವ ಮೂಲಕ ಮತದಾನದ ಹಕ್ಕು ಚಲಾವಣೆಗೆ ಕಂಟಕವಾಗಿದೆ ಎಂದು ಕಿಡಿಕಾರಿರುವ ರಾಜಕೀಯ ಪಕ್ಷಗಳು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಯೋಗದ ಮೇಲೆ ಒತ್ತಡ ಹೇರಿವೆ. ಗಮನಾರ್ಹವೆಂದರೆ ರಾಜಕೀಯ ಪಕ್ಷಗಳು ಒತ್ತಟ್ಟಿಗಿರಲಿ. ಮತದಾರರೂ ಆಯೋಗದ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಚುನಾವಣೆಯಂದು ಮತದಾನ ಬೆಳಗ್ಗೆ 7ಕ್ಕೆ ಆರಂಭವಾಗುತ್ತಿತ್ತು. ಸಂಜೆ 5 ಗಂಟೆಗೆ ಮುಗಿಯುತ್ತಿತ್ತು. ಆದರೆ ಈಗ ಹಾಗಲ್ಲ. ಬೆಳಗ್ಗೆ ಒಂದು ಗಂಟೆ ತಡವಾಗಿ ಅಂದರೆ 8 ಗಂಟೆಗೆ ಮತದಾನ ಪ್ರಾರಂಭಿಸುವ ಹೊಸ ಸಂಪ್ರದಾಯಕ್ಕೆ ಆಯೋಗ ಮುಂದಾಗಿದೆ.
ಇತ್ತೀಚಿಗೆ ಕೆಲ ರಾಜ್ಯಗಳಲ್ಲಿ ನಡೆದ ಚುನಾವಣೆಗೆ ಸಕಾರಣವಾಗಿ ಬೆಳಗ್ಗೆ 8ಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಲಾಗಿದೆ. ಗುಡ್ಡಗಾಡು ಹಾಗೂ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಈ ನೀತಿ ಓಕೆ. ಆದರೆ ಕರ್ನಾಟಕಕ್ಕೂ ಇದೇ ನೀತಿ ಅನ್ವಯಿಸುವುದು ಎಷ್ಟರಮಟ್ಟಿಗೆ ಸರಿ? ರಾಜ್ಯದಲ್ಲಿ ಇದುವರೆಗೆ ನಡೆದಿರುವ ಲೋಕಸಭೆ, ವಿಧಾನಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿಯೂ ಮತದಾನ ಬೆ. 7ಕ್ಕೆ ಆರಂಭವಾದ ಸಂಪ್ರದಾಯವಿದೆ.












Click it and Unblock the Notifications