ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಫ್ಯಾನ್ ಚಿಹ್ನೆ ಇಲ್ಲ

ಡಿ ಫಾರ್ಮ್ ನಲ್ಲಿನ ದೋಷದಿಂದಾಗಿ ಬಳ್ಳಾರಿ ಜಿಲ್ಲೆಯ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೊದಲು ಪಕ್ಷದ ವತಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳಿಗೆ ಪಕ್ಷದ ಅಧಿಕೃತ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಆದರೆ, ಬಿಎಸ್ಆರ್ ಕಾಂಗ್ರೆಸ್ ಬಳ್ಳಾರಿ ಜಿಲ್ಲೆಯಲ್ಲಿ ಈ ರೀತಿ ಅರ್ಜಿ ಸಲ್ಲಿಸಿಲ್ಲ.
ಆದ್ದರಿಂದ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಜಿಲ್ಲೆಯಲ್ಲಿ ಸೀಲಿಂಗ್ ಫ್ಯಾನ್ ಚಿಹ್ನೆ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ನಿರಾಕರಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕ್ರಮ ಪ್ರಶ್ನಿಸಿ ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರ ಏಕಸದಸ್ಯ ಪೀಠ, ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಯಾಗಿದೆ. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ.
ಪಕ್ಷೇತರರಾಗಿ ಅಭ್ಯರ್ಥಿಗಳು ಸ್ಪರ್ಧಿಸಲಿ. ಪ್ರಚಾರದ ವೇಳೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಗಳೆಂದು ಪ್ರಚಾರ ಮಾಡಲು ಅನುಮತಿ ನೀಡುವುದಾಗಿ ಆದೇಶಿಸಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಹೈಕೋರ್ಟ್ ಆದೇಶದಿಂದಾಗಿ ಶ್ರೀರಾಮುಲು ಅವರಿಗೆ ತಮ್ಮ ಬಳ್ಳಾರಿ ಜಿಲ್ಲೆಯಲ್ಲಿಯೇ ಪಕ್ಷದ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕಿಳಿಸುವ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಎಸ್ಆರ್ ಕಾಂಗ್ರೆಸ್ ನಿಂದ ರಾಜ್ಯಾದ್ಯಂತ 1496 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.












Click it and Unblock the Notifications