ರಾಜಕೀಯದಲ್ಲಿ 50 ವಸಂತ ಕಂಡ ಕೃಷ್ಣಗೆ ಸನ್ಮಾನ

ಭಾನುವಾರ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಮಾರ್ಚ್ 24ರಂದು ನಗರದ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಏಪರ್ಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಎಚ್.ವಿಶ್ವನಾಥ್, ಶಾಸಕ ಡಿ.ಕೆ.ಶಿವಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ಕೃಷ್ಣ ಅವರ ಕುರಿತು ಅಭಿನಂದನಾ ಗ್ರಂಥ ಹೊರತರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರೊ.ಎಸ್.ಎಲ್.ಶೇಷಗಿರಿರಾವ್, ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಪ್ರೊ.ದೇ.ಜವರೇಗೌಡ ಮುಂತಾದವರ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಎಸ್.ಎಂ.ಕೃಷ್ಣ (80) ತಮ್ಮ ಐವತ್ತು ವರ್ಷಗಳ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಅಪಾರ ಅನುಭವ ಪಡೆದಿದ್ದಾರೆ. ಅವರ ಅನುಭವ ಉಪಯೋಗಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ನಾಯಕರ ಆಲೋಚನೆ.
ಆದ್ದರಿಂದ ಅಭಿನಂದನಾ ಸಮಾರಂಭದ ಮೂಲಕ ರಾಜ್ಯ ರಾಜಕಾರಣಕ್ಕೆ ಕೃಷ್ಣ ಅವರನ್ನು ಮರಳಿ ಕರೆತರಲು ನಾಯಕರು ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನುವುದು ಸತ್ಯ. ಅಭಿನಂದನಾ ಸಮಾರಂಭದಲ್ಲೇ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಪ್ರಾರಂಭಿಸಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ ಎನ್ನುತ್ತಿವೆ ಮೂಲಗಳು. ಹಾಗಾದರೆ ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆಯೇ?
ಬರಿಗೈಲಿ ಮರಳಿದ ಮಿಸ್ತ್ರಿ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂಧನ್ ಮಿಸ್ತ್ರಿ ಶನಿವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಅನ್ಯ ಪಕ್ಷೀಯರ ಸೇರ್ಪಡೆ ಬಗ್ಗೆ ರಾಜ್ಯದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ, ಮೂಲ ಕಾಂಗ್ರೆಸಿಗರ ಅಸಮಾಧಾನದಿಂದಾಗಿ ಯಾವುದೇ ನಿರ್ಣಯ ಕೈಗೊಳ್ಳದೆ ಹಿಂತಿರುಗಿದ್ದಾರೆ.
ಇದರಿಂದ ಕಾಂಗ್ರಸ್ ಸೇರುವ ಉತ್ಸಾಹದಲ್ಲಿದ್ದ ಅನ್ಯ ಪಕ್ಷದ ಅಭ್ಯರ್ಥಿಗಳಿಗೆ ಹಿನ್ನೆಡೆವುಂಟಾಗಿದೆ. ಗೆಲ್ಲುವ ಅಭ್ಯರ್ಥಿಗಳು ಪಕ್ಷದಲ್ಲೇ ಇರುವಾಗ ವಲಸಿಗರಿಗೆ ಟಿಕೆಟ್ ನೀಡಲು ಮೂಲ ಕಾಂಗ್ರೆಸಿಗರು ವಿರೋಧ ವ್ಯಕ್ತಪಡಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾಸಲಾಗಿದೆ.












Click it and Unblock the Notifications