ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ

'ಬಿಜೆಪಿ ಯಿಂದ ನನಗೆ ಅನ್ಯಾಯವಾಗಿದೆ. ಪುತ್ತೂರಿನಿಂದ ನಾನೊಬ್ಬಳೆ ಚುನಾಯಿತ ಪ್ರತಿನಿಧಿಯಾಗಿದ್ದೆ. ಆದರೆ, ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ರಾಜಕೀಯವೇ ಬೇಡ ಎಂದು ದೂರ ಉಳಿದಿದ್ದೆ. ಆದರೆ, ಕಾರ್ಯಕರ್ತರ ಒತ್ತಡದಿಂದ ಮತ್ತೆ ರಾಜಕೀಯಕ್ಕೆ ಮರಳಿದ್ದೇನೆ ಎಂದು ಶಕುಂತಲಾ ಶೆಟ್ಟಿ ಅವರು ಹೇಳಿದ್ದಾರೆ.
ಸೋಮವಾರ(ಫೆ.25) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ಬಂಡಾಯ ನಾಯಕಿ ಶಕುಂತಲಾ, ಜೆಡಿಎಸ್ ಹಾಗೂ ಕೆಜೆಪಿಯಿಂದಲೂ ಆಫರ್ ಬಂದಿತ್ತು. ಆದರೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತಾ ವೈಖರಿ ಮೆಚ್ಚುತ್ತೇನೆ. ಕಾರಣಾಂತರದಿಂದ ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಎಂದಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರೊಡನೆ ಪುತ್ತೂರಿನ ರಾಜಕಾರಣಿ ಶಕುಂತಲಾ ಅವರು ಮೀಟಿಂಗ್ ಮಾಡಿದ ಬಗ್ಗೆ ಇತ್ತೀಚಿಗೆ ಸುದ್ದಿ ಹಬ್ಬಿತ್ತು. ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಶಕುಂತಲಾ ಅವರು ಎರಡನೇ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿರಲಿಲ್ಲ. ನಂತರ ಬಂಡಾಯ ಎದ್ದು ಸ್ವಾಭಿಮಾನಿ ವೇದಿಕೆ ಅಡಿಯಲ್ಲಿ ಸ್ಪರ್ಧಿಸಿದ್ದರು. ಆದರೆ, ಬಿಜೆಪಿ ಅಧಿಕೃತ ಅಭ್ಯರ್ಥಿ ಮಲ್ಲಿಕಾ ಪ್ರಸಾದ್ ವಿರುದ್ಧ ಸೋಲು ಕಂಡಿದ್ದರು.
ನಂತರ ಜೆಡಿಎಸ್ ನತ್ತ ವಾಲಿದ್ದ ಶಕುಂತಲಾ ಅವರು ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಪುತ್ತೂರಿನಲ್ಲಿ ನಡೆದ ಜೆಡಿಎಸ್ ನ ಒಂದೆರಡು ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು.
ನಂತರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಕರೆ ಬಂದಿತ್ತು, ಕರ್ನಾಟಕ ಜನತಾ ಪಕ್ಷ ಸೇರುವ ಸಾಧ್ಯತೆ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಎರಡೂ ಪಕ್ಷಗಳ ಆಫರ್ ಬದಿಗೊತ್ತಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಪುತ್ತೂರಿನಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿದೆ ಎಂಬ ಸುದ್ದಿ ಇದೆ.












Click it and Unblock the Notifications