ವರ್ತೂರಿಗೆ 30-40 ಕುರುಬರು ಶಾಸಕರಾಗಬೇಕಂತೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮಂತೆ ಪಕ್ಷಾತೀತರಾಗಿ ಯಾವ ಪಕ್ಷದಿಂದಲಾದರೂ ಸರಿಯೇ 30-40 ಮಂದಿ ಕುರುಬರನ್ನು ಶಾಸಕರನ್ನಾಗಿ ಮಾಡಿ ಸಾಕು ಎಂದು ತಮ್ಮ ಸಮಾಜ ಬಾಂಧವರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಸಮಾಜ ಬಾಂಧವರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 30-40 ಜನ ಕುರುಬರನ್ನು ಚುನಾವಣೆಗೆ ನಿಲ್ಲಿಸಿ, ಶಾಸಕರನ್ನಾಗಿ ಆರಿಸಿ ಕಳಿಸಬೇಕು ಎಂದು ಸಚಿವ ವರ್ತೂರು ಪ್ರಕಾಶ್ ಕರೆ ನೀಡಿದ್ದಾರೆ.
ಸೋಮವಾರ ಇಂಡಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ತಾಲೂಕು ಕುರುಬ ಸಮಾಜ ಬಾಂಧವರ ಜನಜಾಗೃತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಸಚಿವ ವರ್ತೂರು ಸಮುದಾಯದ ಬಗ್ಗೆ ಈ ಕಳಕಳಿ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸಮಾಜ ಬಾಂಧವರ ಒಪ್ಪಿಗೆಯ ಮೇರೆಗೆ ಇದೇ ಮಾಸಾಂತ್ಯಕ್ಕೆ ತಾಲೂಕಿನಲ್ಲಿ ಕುರುಬ ಸಮಾಜದವರ ಜಾಗೃತಿಗಾಗಿ ಬೃಹತ್ ಸಮಾವೇಶ ಆಯೋಜಿಸುವುದಾಗಿಯೂ ಅವರು ತಿಳಿಸಿದರು. ಇಂಡಿ ತಾಲೂಕಿನಲ್ಲಿ ಹುಟ್ಟಿದ ಕುರುಬ ಸಮಾಜದ ವ್ಯಕ್ತಿಯೊಬ್ಬ ಈ ಕ್ಷೇತ್ರದ ಶಾಸಕ ಆಗಬೇಕು. ಈ ಕುರಿತು ಪ್ರತಿಯೊಬ್ಬರೂ ಶ್ರಮಿಸಿ ಇದಕ್ಕಾಗಿ ನಡೆಯಲಿರುವ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಸಚಿವರು ಮನವಿ ಮಾಡಿಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಳಪ್ಪಾ ಉಕ್ಕಲಿ ಮಾತನಾಡಿ ಈ ಸಮಾವೇಶಕ್ಕೆ ಸಮಾಜ ಬಾಂಧವರಾದ ಸಿದ್ದರಾಮಯ್ಯ, ಕೆಎಸ್ ಈಶ್ವರಪ್ಪ, ಎಚ್ ವಿಶ್ವನಾಥ್, ಬಂಡೆಪ್ಪಾ ಕಾಶಂಪೂರ ಅವರನ್ನು ಸೇರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಮದ್ದಾನೆ ಮಹಾರಾಜರು, ನ್ಯಾಯವಾದಿ ಎಸ್‌ಎಸ್ ಪೂಜಾರಿ, ನಿಂಗಪ್ಪ ಬಪ್ಪರಗಿ, ಜಿಪಂ ಸದಸ್ಯ ಮಾಗಣಗೇರಿ,ಲಕ್ಷ್ಮಿಕಾಂತ ತೋಂಟಾಪುರ, ಸಿದ್ದಪ್ಪ ಗುನ್ನಾಪುರ, ಮಲ್ಲಣ್ಣ ಶಿರಶ್ಯಾಡ, ಮಹಾದೇವ ಹಿರೇಕುರುಬರ, ಯಶವಂತರಾಯ ಕೋಳೂರ, ಮಾತಾ ಶರಣಮ್ಮಾ ಅನೇಕರು ಉಪಸ್ಥಿತರಿದ್ದರು. ಶಂಕರ ಹೂಗಾರ, ಸಂತೋಷ ಹೂಗಾರ, ಮಲ್ಲು ಡೆಂಗೆ, ಎಪಿ ಕಾಗವಾಡಕರ ಮತ್ತಿತರ ಮುಖಂಡರು ಭಾಗವಹಿಸಿದ್ದರು.












Click it and Unblock the Notifications