ಕೊಪ್ಪಳ : ಗವಿಸಿದ್ಧೇಶ್ವರ ಜಾತ್ರೆ ಲೈವ್ ನೋಡಿ
ಕೊಪ್ಪಳ, ಜ.29: ಇಲ್ಲಿನ ಇತಿಹಾಸ ಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದೇಶ ಗಡಿ ದಾಟಿ ಎಲ್ಲರನ್ನು ಆಕರ್ಷಿಸಿರುವುದಷ್ಟೇ ಅಲ್ಲದೆ, ಇಂಟರ್ನೆಟ್ ನಲ್ಲೂ ಸದ್ದು ಮಾಡುತ್ತಿದೆ. ಗವಿಸಿದ್ಧೇಶ್ವರ ಜಾತ್ರಾ ಮಹಾರಥೋತ್ಸವ ಹಾಗೂ ಅನುಭಾವಿಗಳ ಅಮೃತ ಚಿಂತನ ಗೋಷ್ಠಿ ಸಮಾರಂಭ ಆನ್ ಲೈನ್ ಮೂಲಕ ಲಕ್ಷಾಂತರ ಭಕ್ತಾದಿಗಳನ್ನು ತಲುಪಲಿದೆ.
ಜ.25ರಿಂದ ಗವಿಮಠ ಮಹಾಸಂಸ್ಥಾನ ತನ್ನ ಅಧಿಕೃತ ವೆಬ್ ತಾಣದಲ್ಲಿ ಶ್ರೀಮಠದ ಜಾತ್ರಾ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ನೇರ ಪ್ರಸಾರ ವೀಕ್ಷಣೆಗೆ ಒದಗಿಸುತ್ತಿದೆ. ಜ.25ರಂದು ಬಸವ ಪಟ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮವಿತ್ತು. ಜ.27ರಂದು ಪಲ್ಲಕ್ಕಿ ಉತ್ಸವ, ಜ.28ರಂದು ಲಘು ರಥೋತ್ಸವ, ಸಂಗೀತ ಕಾರ್ಯಕ್ರಮ ಲೈವ್ ಪ್ರಸಾರವಿತ್ತು.

ಜ.29ರಂದು ಗವಿಸಿದ್ಧೇಶ್ವರ ಮಹಾರಥೋತ್ಸವ ಹಾಗೂ ಅನುಭಾವಿಗಳ ಅಮೃತ ಚಿಂತನಗೋಷ್ಠಿ ಸಾಗಿದೆ. ಜ.30ರಂದು ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಹಾಗೂ ಭಕ್ತ ಹಿತ ಚಿಂತನಾ ಸಭೆ ನಡೆಯಲಿದೆ.
ಜ.31ರಂದು ಸಾಯಂಕಾಲ ಸಮಾರೋಪ ಸಮಾರಂಭ ಮತ್ತು ಹಾಸ್ಯೋತ್ಸವ ಅನ್ ಲೈನ್ ನಲ್ಲಿ ಪ್ರಸಾರವಾಗಲಿದೆ ಎಂದು ಗವಿಮಠದ ಅಧಿಕಾರಿಗಳು ಒನ್ ಒಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಗವಿಸಿದ್ಧೇಶ್ವರ ಸನ್ನಿಧಿ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ದಕ್ಷಿಣ ಭಾರತ ಕುಂಭಮೇಳ ಎಂದೆ ಪ್ರಸಿದ್ಧಿ ಪಡೆದಿದೆ. ಈ ಜಾತ್ರಾ ಮಹೋತ್ಸವದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದಾರೆ.
15 ದಿನಗಳ ಕಾಲ ಸ್ವಯಂಪ್ರೇರಿತರಾಗಿ ಭಕ್ತರು ದಾಸೋಹದಲ್ಲಿ ಪಾಲ್ಗೊಳ್ಳುತ್ತಾರೆ. 3 ಲಕ್ಷ ಕ್ವಿಂಟಾಲ್ ರೊಟ್ಟಿ ಹಾಗೂ ವಿವಿಧ ಖಾದ್ಯಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಗವಿಮಠದ ಪರಂಪರೆಯಲ್ಲಿ ಜ.ಗವಿಸಿದ್ಧೇಶ್ವರರು ಗುರು ಪರಂಪರೆ ಯಲ್ಲಿ ಹನ್ನೊಂದನೆಯವರು, ಪರಮ ಪೂಜ್ಯ ಸ್ವಾಮೀಜಿಗಳು 1816ರ ಶ್ರೀಮುಖ ಸಂವತ್ಸರದ ಶುದ್ಧ ಬಿದಿಗೆಯಂದು ಪ್ರಾಣವನ್ನು ಬ್ರಹ್ಮಸ್ಥಾನಕ್ಕೇರಿಸಿ ಸಜೀವ ಸಮಾಧಿಯಾದರು. ಅಂದಿನಿಂದ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಅಮೋಘವರ್ಷ ನೃಪತುಂಗನು ಕೊಪ್ಪಳ ನಗರವನ್ನು 'ವಿದಿತ ಮಹಾ ಕೋಪಣ ನಗರ' ಎಂದು ಬಣ್ಣಿಸಿದ್ದಾನೆ. ಕೊಪ್ಪಳ ಜಿಲ್ಲೆಯಲ್ಲಿ ಕನಕಗಿರಿ, ಹುಲೆಗಮ್ಮ ದೇಗುಲ, ಆನೆಗುಂದಿ ಸಂಸ್ಥಾನಗಳು ಪ್ರಮುಖ ಧಾರ್ಮಿಕ ಸ್ಥಳಗಳಾಗಿದೆ.












Click it and Unblock the Notifications