ಯಡಿಯೂರಪ್ಪಗೆ ತಕ್ಕ ಶಾಸ್ತಿ ಮಾಡಲು ಶೆಟ್ಟರ್ ಪಣ
ಬೆಂಗಳೂರು, ಜ.18: 'ಅತ್ತ ಬಿಜೆಪಿಗೆ ಶೆಟ್ರೂ ಇಲ್ಲ. ಇತ್ತ ಕೆಜೆಪಿಗೆ ಯಡಿಯೂರಪ್ಪನೋರು ಅಲ್ಲ. ನಾನೇ ಎಲ್ಲಾ. ಒಂದು ಕೈ ನೋಡಿ' ಎಂದು ವೀರಶೈವ ಸಮುದಾಯದ ಅಧಿನಾಯಕ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ಹೈಕಮಾಂಡಿಗೆ ಧಮ್ಕಿ ಹಾಕಿರುವ ಸರಿಹೊತ್ತಿನಲ್ಲೇ ...
ಇತ್ತ ಬಿಜೆಪಿ ಚುನಾವಣೆ ಸಾರಥಿ ಜಗದೀಶ್ ಶೆಟ್ಟರ್ ಅವರು ಇದೇ ವೀರಶೈವ ನಾಯಕತ್ವ ವಿಷಯವನ್ನು ಮುಂದಿಟ್ಟುಕೊಂಡು ವೀರಶೈವ ಸಮುದಾಯದ ಮತ್ತೊಬ್ಬ ಅಧಿನಾಯಕ ಯಡಿಯೂರಪ್ಪಗೆ ಸರಿಯಾಗಿ ಮುಳುಗುನೀರು ತರಲು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ತಮ್ಮ ಸರಕಾರವನ್ನು ಉರುಳಿಸುವ ಯಡಿಯೂರಪ್ಪ ಡೆಡ್ ಲೈನ್ ಮಾಧ್ಯಮಗಳಲ್ಲಿ 'ಹೆಡ್ ಲೈನ್' ನಿಂದ 'ಚೂರುಪಾರು'ಗೆ ಜಾರುತ್ತಿದ್ದಂತೆ ಸಿಎಂ ಶೆಟ್ಟರ್ ಸೆಟೆದು ನಿಂತಿದ್ದಾರೆ. ಶೆಟ್ಟರ್ ಅವರನ್ನೇ ಮುಂದಿನ ಸಿಎಂ ಎಂದು ಬಿಂಬಿಸುವ ಮೂಲಕ ಬಿಜೆಪಿ ವರಿಷ್ಠರು ಸಹ ಸರಿಯಾದ ದಾಳವನ್ನೇ ಉರುಳಿಸಿದ್ದಾರೆ. ಇದರಿಂದ ಮುಖ್ಯವಾಗಿ ಸಚಿವರಾದ ಸೋಮಣ್ಣ, ಉಮೇಶ್ ಕತ್ತಿ, ರಾಜು ಗೌಡ, ಬಸವರಾಜ ಬೊಮ್ಮಾಯಿ ಮುಂತಾದ ನಾಯಕರು ಜಪ್ಪಯ್ಯ ಅಂದ್ರೂ ತಮ್ಮ ನಾಯಕ ಯಡಿಯೂರಪ್ಪ ಅವರತ್ತ ಸುಳಿದಾಡುತ್ತಿಲ್ಲ.
'ಭಾವಿ ಮುಖ್ಯಮಂತ್ರಿ' ಶೆಟ್ಟರ್ ವೀರಶೈವ ಸಮುದಾಯದಲ್ಲೂ ಸಂಚಲನ ತಂದಿದ್ದಾರೆ. ಯಡಿಯೂರಪ್ಪಗೆ ದಿಟ್ಟ ಸವಾಲಾಗಿ ಪರಿಣಮಿಸಿದ್ದಾರೆ. ಇದರಿಂದ ಚುನಾವಣೆಗೂ ಮುನ್ನವೇ ಬಿಜೆಪಿಗೆ 'ವೀರಶೈವ ದಾಳ' ಭಾರಿ ಪ್ರಯೋಜನಕಾರಿಯಾಗಿ ಪರಿಣಮಿಸಿದೆ.
ಉತ್ತರ ಕರ್ನಾಟಕದ ಮಣ್ಣಿನ ಮಗ, ಶುದ್ಧಹಸ್ತದ ಸಜ್ಜನ ಶೆಟ್ಟರ್ ಮೂಲಕ ಅವರ ಪಕ್ಷವು ಯಡಿಯೂರಪ್ಪ ಅವರ ಬುಡಕ್ಕೆ ಕೈಹಾಕಲು ಮುಂದಾಗಿದೆ. ಬಜೆಟ್ ಮಂಡನೆಯನ್ನು ಪ್ರಧಾನ ಸಾಧನವಾಗಿ ಬಳಸಿಕೊಳ್ಳಲು ಬಿಜೆಪಿ ಸರಕಾರ ಸಿದ್ಧತೆ ನಡೆಸಿದೆ. ಆ ಮೂಲಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಜನಪ್ರಿಯ (ಜನಪರ ಅಲ್ಲ) ಯೋಜನೆಗಳನ್ನು ಘೋಷಿಸುವುದು ಸ್ವತಃ ಬಜೆಟ್ ಮಂಡಿಸುವ ಶೆಟ್ಟರ್ ಅವರ ಇರಾದೆಯಾಗಿದೆ.
ಮರೆತ ಮಾತು: ಎಲ್ಲಕ್ಕಿಂತ ಮಿಗಿಲಾಗಿ ವೀರಶೈವ ಸಮುದಾಯದ ತಾವು ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಇನ್ನಿಲ್ಲದಂತೆ ತೊಡರುಗಾಲು ಹಾಕಿದ್ದ ಯಡಿಯೂರಪ್ಪಗೆ ತಕ್ಕ ಶಾಸ್ತಿ ಮಾಡಲು ಈ ಬಾರಿ ಶೆಟ್ಟರ್ ಸಹ ನಿರ್ಧರಿಸಿರುವಂತಿದೆ.












Click it and Unblock the Notifications