ಕಾವೇರಿ ನೀರು ಹಂಚಿಕೆ : ತಮಿಳುನಾಡಿಗೆ ಹಿನ್ನಡೆ

ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಡಿ.ವಿ. ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಂಡಿದೆ. ಈ ಸಭೆಯಲ್ಲಿ ಕಾವೇರಿ ನದಿ ಪಾತ್ರದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ಜನವರಿ ತಿಂಗಳಿನಲ್ಲಿ 1 ರಿಂದ 9 ರ ತನಕ ಮೆಟ್ಟೂರು ಡ್ಯಾಂನಲ್ಲಿ 1.6 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಅವಧಿಯಲ್ಲಿ ಕರ್ನಾಟಕದಿಂದ ನೀರು ಹರಿಸಿಲ್ಲ ಎಂಬುದು ಗಮನಾರ್ಹ.
ಸಭೆಯಲ್ಲಿ ಎಂದಿನಂತೆ ಕೃಷಿಗಾಗಿ ನೀರು, ರೈತರ ಬವಣೆ ಬಗ್ಗೆ ವಿವರಣೆ ನೀಡಿದ ತಮಿಳುನಾಡು ವಾದ ಮಂಡನೆಗೆ ಸಿಎಂಸಿ ಸೊಪ್ಪು ಹಾಕಿಲ್ಲ. ಕಾವೇರಿ ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಪ್ರಕಟಿಸಬೇಕೆಂದು ಆಗ್ರಹಿಸಿದ್ದರೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಜನವರಿ ತಿಂಗಳಿನ ಪಾಲು ಸೇರಿದಂತೆ ಕರ್ನಾಟಕದಿಂದ 52 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಗ್ರಹಿಸಿತು. ತಮಿಳುನಾಡಿನ ವಾದಕ್ಕೆ ಇಂಬು ಕೊಟ್ಟಂತೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳ ಪ್ರತಿನಿಧಿಗಳು ದನಿಗೂಡಿಸಿದರು.
ಕುಡಿಯುವ ನೀರು ಮುಖ್ಯ: ರಾಜ್ಯ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು, ಕಾವೇರಿ ನದಿ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಈಗಿರುವ ನೀರಿನ ಪ್ರಮಾಣ ಕೇವಲ 17 ಟಿಎಂಸಿ. ಮಳೆ ಬಂದಾಕ್ಷಣಕ್ಕೆ ಈ ಜಲಾಶಯಗಳು ತುಂಬುವುದಿಲ್ಲ.
ಅಲ್ಲದೇ, ಮುಂದಿನ ಮೇ 30ರವರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳು ಮತ್ತು ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
ಕರ್ನಾಟಕಕ್ಕೆ 30 ಟಿಎಂಸಿಗೂ ಅಧಿಕ ನೀರು ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇರುವಾಗ ತಮಿಳುನಾಡಿಗೆ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂದು ಸಮರ್ಥ ವಾದ ಮಂಡಿಸಿದರು.
ರಾಜ್ಯದ ವಾದಕ್ಕೆ ಮನ್ನಣೆ ನೀಡಿದ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಡಿ.ವಿ.ಸಿಂಗ್ ಅವರು ಕೃಷಿಗಿಂತ, ಕುಡಿಯುವ ನೀರು ಮುಖ್ಯ ಎಂದು ಪರಿಗಣಿಸಿ, ಕರ್ನಾಟಕ ಇನ್ನು ನೀರು ಬಿಡಬೇಕಿಲ್ಲ ಎಂಬ ನಿರ್ಣಯಕ್ಕೆ ಬಂದರು.












Click it and Unblock the Notifications