ಡಿಸ್ಕೋಗೆ ಹೋಗುವ ಅಲಂಕೃತ ಸ್ತ್ರೀಯರಿಂದ ಪ್ರತಿಭಟನೆ

ಗಮನಾರ್ಹವೆಂದರೆ, ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ಎದುರು ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಮೊನ್ನೆ ನಾಲ್ಕು ಒಳ್ಳೆಯ ಮಾತುಗಳನ್ನಾಡಿ, ರೇಪ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ತಮಗೆ ಅರ್ಥವಾಗುತ್ತವೆ ಎಂದು ಸ್ಪಂದಿಸಿದ್ದರು.
ಇದೀಗ ಅಭಿಜಿತ್ ಮುಖರ್ಜಿಯ ವಿವಾದಿತ ಹೇಳಿಕೆಗೆ ಕಾಡ್ಗಿಚ್ಚಿನಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅಭಿಜಿತ್, ಇದೊಂದು ರೀತಿಯ 'ಪಿಂಕ್ ಕ್ರಾಂತಿ' ಆಗಿದೆ ಎಂದಿದ್ದಾರೆ.
'ಇಲ್ಲಿ ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಮಹಿಳೆಯರಿಗೆ ವಾಸ್ತವದ ಅರಿವು ಒಂಚೂರೂ ಇಲ್ಲ. ಈ ಸರ್ವಾಲಂಕೃತ ಸುಂದರ ಮಹಿಳೆಯರು ನಿಜಕ್ಕೂ ವಿದ್ಯಾರ್ಥಿಗಳಲ್ಲ. ಗಂಭೀರ ಪ್ರತಿಭಟನಾಕಾರರೂ ಅಲ್ಲ. ಅವರು ಟಿವಿ ಕ್ಯಾಮರಾಗಳ ಎದುರು ಮಾತನಾಡಿರುವುದನ್ನು ನೋಡಿದ್ದೇನೆ. ವಿದ್ಯಾರ್ಥಿಗಳು ಹೀಗೆಲ್ಲ ಇರುವುದಿಲ್ಲ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಡಿಸ್ಕೋ ಕೇಂದ್ರಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಕೈಯಲ್ಲಿ ಕ್ಯಾಂಡೆಲ್ ಹಿಡಿದು, ಪ್ರತಿಭಟನೆ ನಡೆಸುವುದು ಫ್ಯಾಷನ್ ಆಗಿಬಿಟ್ಟಿದೆ ಎಂದೂ ಅಭಿಜಿತ್ ವರ್ಣಿಸಿದ್ದಾರೆ. ಅಂದಹಾಗೆ, ಅಭಿಜಿತ್ ಜಂಗೀಪುರ ಕ್ಷೇತ್ರದ ಕಾಂಗ್ರೆಸ್ ಸಂಸದ.
ಕ್ಷಮೆಕೋರಿದ ಸೋದರಿ ಶರ್ಮಿಷ್ಠಾ: ತಮ್ಮ ಸೋದರ ಅಭಿಜಿತ್ ಮುಖರ್ಜಿ ಅವರು ದೆಹಲಿ ಪ್ರತಿಭಟನಾಕಾರರ ಬಗ್ಗೆ ಅನುಚಿತ ಹೇಳಿಕೆ ನೀಡಿರುವುದಕ್ಕೆ ಅಭಿಜಿತ್ ಸೋದರಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಕ್ಷಮೆ ಕೋರಿದ್ದಾರೆ. ಅಭಿಜಿತ್ ವಿವಾದಾತ್ಮಕ ಹೇಳಿಕೆಯನ್ನು ತಮ್ಮ ಕುಟುಂಬ ಖಂಡಿಸುತ್ತದೆ ಎಂದಿದ್ದಾರೆ.












Click it and Unblock the Notifications