ತಮಿಳುನಾಡಿಗೆ ನೀರು ಬಿಡಲು ಸುಪ್ರೀಂ ಆದೇಶ

SC order on Cauvery dispute
ನವದೆಹಲಿ, ಡಿ.5: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕ ರಾಜ್ಯಕ್ಕೆ ಮತ್ತೊಮ್ಮೆ ಭಾರಿ ಹಿನ್ನೆಡೆ ಉಂಟಾಗಿದೆ. ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಬುಧವಾರ (ಡಿ.5) ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಸೋಮವಾರ (ಡಿ.10)ಕ್ಕೆ ಮುಂದೂಡಲಾಗಿದೆ,

ಎರಡು ದಿನಗಳ ಕಾಲ ಸುದೀರ್ಘವಾಗಿ ವಾದ ಪ್ರತಿವಾದವನ್ನು ಆಲಿಸಿದ ನ್ಯಾ. ಡಿ.ಕೆ. ಜೈನ್ ಹಾಗೂ ನ್ಯಾ ಮದನ್ ಬಿ. ಲೋಕೂರ್ ಅವರಿದ್ದ ನ್ಯಾಯಪೀಠ ಬುಧವಾರ (ಡಿ.5) ತೀರ್ಪು ನೀಡಿದೆ.

ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಕರ್ನಾಟಕದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಜೊತೆ ನಗರದ ಲೀಲಾ ಪ್ಯಾಲೇಸ್ ನಲ್ಲಿ ನಡೆದ ಮಾತುಕತೆ ಇತ್ತೀಚೆಗೆ ಮುರಿದು ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ?: ಡಿ.5 ರಿಂದ ಡಿ.9 ರವರೆಗೆ ಪ್ರತಿ ದಿನ ತಮಿಳುನಾಡಿಗೆ ಸುಮಾರು 10,000 ಕ್ಯೂಸೆಕ್ಸ್ ನೀರನ್ನು ಕರ್ನಾಟಕ ಹರಿಸಬೇಕು. 5 ದಿನಗಳಲ್ಲಿ 50,000 ಕ್ಯೂಸೆಕ್ಸ್ ನಷ್ಟು ನೀರು ಹರಿಸಬೇಕಾಗುತ್ತದೆ. ತಮಿಳುನಾಡು ಬೆಳೆಗಾರರ ಅಗತ್ಯದ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಶುಕ್ರವಾರ (ಡಿ.7) ಸಿಎಂಸಿ ಸಭೆ ಆಯೋಜಿಸಲು ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಮುಂದೇನು?: ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಮೀರುವಂತಿಲ್ಲ. ಸುಮಾರು 4.5 ಟಿಎಂಸಿ ಅಡಿಗಳಷ್ಟು ನೀರನ್ನು ತಮಿಳುನಾಡಿಗೆ ಹರಿಸುವುದು ಅನಿವಾರ್ಯವಾಗಿದೆ.

ಬೆಂಗಳೂರಿನ ಕುಡಿಯುವ ನೀರಿಗೆ 20 ಟಿಎಂಸಿ ನೀರು ಅಗತ್ಯವಿದೆ. ರಾಜ್ಯದಲ್ಲಿ 37 ಟಿಎಂಸಿ ನೀರು ಮಾತ್ರ ಜಲಾಶಯಗಳಲ್ಲಿದೆ. 30 ಟಿಎಂಸಿ ನೀರು ಬಿಡಬೇಕು ಎಂದು ತಮಿಳುನಾಡು ಬೇಡಿಕೆ ಒಡ್ಡಿದೆ.

ಮೆಟ್ಟೂರು ಡ್ಯಾಂನಲ್ಲಿ 16 ಟಿಎಂಸಿ ನೀರು ಮಾತ್ರ ಇದೆ. ಅದು ಇನ್ನೂ 6 ದಿನಗಳಿಗೆ ಮಾತ್ರ ಸಾಕಾಗುತ್ತದೆ. ಸಾಂಬಾ ಬೆಳೆಗಳನ್ನು ಉಳಿಸಿಕೊಳ್ಳಲು ಮುಂದಿನ 15 ದಿನಗಳಲ್ಲಿ ಕನಿಷ್ಠ 30 ಟಿಎಂಸಿ ಅಡಿ ನೀರು ಬಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ನ.29 ರಂದು ಕೇಳಿಕೊಂಡಿದ್ದರು.

14 ಲಕ್ಷ ಎಕರೆ ಭೂಮಿಯ ಬೆಳೆ ನಾಶವಾದರೆ, ದೊಡ್ಡ ವಿಪತ್ತು ಎದುರಿಸಬೇಕಾಗಿದೆ ಎಂದು ಹೇಳಿ ಸುಪ್ರೀಂಕೋರ್ಟ್ ಗೆ ತಮಿಳುನಾಡು ಮೇಲ್ಮನವಿ ಸಲ್ಲಿಸಿತ್ತು.

ಹೋರಾಟಕ್ಕೆ ಸಿದ್ಧ : ಕರ್ನಾಟಕದ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು, ಜಿ ಮಾದೇಗೌಡರ ನೇತೃತ್ವದ ಕಾವೇರಿ ಹಿತ ರಕ್ಷಣಾ ಸಮಿತಿ ಮಂಡ್ಯ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಮಹತ್ವದ ಸಭೆ ನಡೆಸಲಿದೆ.

ಇದು ಅನ್ಯಾಯದ ತೀರ್ಪು, ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಕೃಷ್ಣರಾಜಸಾಗರ ಅಣೆಕಟ್ಟಿಗೆ ಮತ್ತೊಮ್ಮೆ ರೈತರ ಪಹರೆ ಹಾಕಲಾಗುವುದು. ಒಂದು ಹನಿ ನೀರು ಕೂಡಾ ತಮಿಳುನಾಡು ಕಡೆ ಹರಿಯದಂತೆ ಎಚ್ಚರವಹಿಸಲಾಗುವುದು. ಪೊಲೀಸ್, ಮಿಲಿಟರಿ ಏನೇ ಬಂದರೂ ನಾವು ಜಗ್ಗುವುದಿಲ್ಲ ಎಂದು ರೈತ ಮುಖಂಡ ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+