ಹೈಕ : ಈಗಿನ ಸ್ಥಿತಿಯಲ್ಲಿ ಮಸೂದೆ ಮಂಡನೆ ಖಚಿತ
ನವದೆಹಲಿ, ನ. 27 : ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ನೀಡಲು ಸಂವಿಧಾನದ 371 (ಜೆ) ಕಲಂ ತಿದ್ದುಪಡಿ ಮಸೂದೆ ಮಂಡನೆಗೆ ಸಂಬಂಧಿಸಿದಂತೆ ಉದ್ಭವಿಸಿದ್ದ ಗೊಂದಲ ನಿವಾರಣೆಯಾಗುವ ಹಂತ ತಲುಪಿದ್ದು, ಈ ಚಳಿಗಾಲದ ಅಧಿವೇಶನದಲ್ಲಿಯೇ ಮಸೂದೆ ಮಂಡನೆಯಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಕ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದಾರೆ.
ವಿದರ್ಭ ಮತ್ತು ತೆಲಂಗಾಣ ಮಾದರಿಯಲ್ಲಿ ಅಲ್ಲ, ಈಗಿರುವ ಸ್ಥಿತಿ, ಅಂದರೆ ಹೈದರಾಬಾದ್ ಕರ್ನಾಟಕ ಮಾದರಿಯಲ್ಲಿಯೇ ಮಸೂದೆ ಮಂಡನೆಯಾಗಲಿದೆ. ಇದಕ್ಕೆ ಕರ್ನಾಟಕ ಸರಕಾರ ಮತ್ತು ಎಲ್ಲ ಸಂಸದೀಯರ ಒಪ್ಪಿಗೆ ಇದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಮಂಗಳವಾರ ಹೇಳಿದ್ದು, ಹೈದರಾಬಾದ್ ಕರ್ನಾಟಕ(ಬೀದರ್, ಗುಲಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ)ದಲ್ಲಿ ಹರುಷದ ಹೊನಲು ಮುಗಿಲುಮುಟ್ಟಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೂಡ ಈ ಕುರಿತಂತೆ ಚರ್ಚಿಸಲು ನವದೆಹಲಿಗೆ ಸೋಮವಾರವೇ ತೆರಳಿದ್ದರು. ಮಂಗಳವಾರ ಅವರು ಕರ್ನಾಟಕ ಭವನದಲ್ಲಿ ರಾಜ್ಯದ ಎಲ್ಲ ಸಂಸದರೊಡನೆ ಮಾತುಕತೆ ನಡೆಸಿ ಈಗಿರುವ ಸ್ಥಿತಿಯಲ್ಲಿಯೇ ಮಸೂದೆ ಮಂಡಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಮಂಗಳವಾರ ನಡೆದ ಚಹಾಕೂಟದ ಸಭೆಯಲ್ಲಿ ಜಗದೀಶ್ ಶೆಟ್ಟರ್, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ವೆಂಕಯ್ಯ ನಾಯ್ಡು, ಬೆಂಗಳೂರು ದಕ್ಷಿಣ ಸಂಸದ ಅನಂತ್ ಕುಮಾರ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕೆ ರೆಹಮಾನ್, ಚಿತ್ರದುರ್ಗದ ಶಾಸಕ ಜನಾರ್ದನ ಸ್ವಾಮಿ, ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ, ಬಳ್ಳಾರಿ ಸಂಸದೆ ಜೆ ಶಾಂತಾ, ರಾಯಚೂರು ಸಂಸದ ಸಣ್ಣ ಫಕೀರಪ್ಪ, ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್, ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮುಂತಾದವರು ಭಾಗವಹಿಸಿದ್ದರು.
ಈ ಮೊದಲು, ಹೈದರಾಬಾದ್ ಕರ್ನಾಟಕ ಮಾದರಿಯಲ್ಲಿ ಮಸೂದೆ ಮಂಡಿಸದೆ ತೆಲಂಗಾಣ ಮಾದರಿಯಲ್ಲಿ ಸಂವಿಧಾನದ 371 ಕಲಂ ತಿಪ್ಪುಪಡಿ ಮಸೂದೆ ಮಂಡಿಸಬೇಕು, ಈಗಿರುವ ಸ್ಥಿತಿಯಲ್ಲಿ ಮಂಡಿಸಬಾರದು ಎಂದು ರಾಜ್ಯ ಸರಕಾರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮಸೂದೆ ಮಂಡನೆ ಮರೀಚಿಕೆಯಾಗಿತ್ತು. ಇದಕ್ಕೆ ಕಾರಣವೇನೆಂದರೆ, ಹೈದರಾಬಾದ್ ಕರ್ನಾಟಕ ಮಾದರಿಯಲ್ಲಿ ಮಸೂದೆ ಮಂಡನೆಯಾದರೆ ಆ ಭಾಗದ ಅಧಿಕಾರದ ಚುಕ್ಕಾಣಿ ರಾಜ್ಯಪಾಲರ ಕೈಗೆ ಬರುತ್ತದೆ.












Click it and Unblock the Notifications