ನಿಲಂ ಆರ್ಭಟ, ಚೆನ್ನೈ ಜನತೆಗೆ ಸಹಾಯವಾಣಿ

ಸಂಜೆ 4.45 ಗಂಟೆ ಸುಮಾರಿಗೆ ಚಂಡಮಾರುತ ನಿಲಂ ವೇಗ 100 ಕಿ.ಮೀ/ ಗಂಟೆ ಯಂತೆ ಅಪ್ಪಳಿಸುತ್ತಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಚೆನ್ನೈನಲ್ಲಿ ಭೂ ಕುಸಿತ ಉಂಟಾಗಿದ್ದು, ಮಹಾಬಲೀಪುರಂನಲ್ಲಿ ಸುಮಾರು 23 ಮರಗಳನ್ನು ಉರುಳಿಸಿದೆ. 2 ಗುಡಿಸಲುಗಳು ನಾಶಗೊಂಡಿದೆ.
ಚೆನ್ನೈನಲ್ಲಿ ಎಲೆಕ್ಟ್ರಿಸಿಟಿ ಹಾಗೂ ಮೊಬೈಲ್ ಸಂಪರ್ಕಗಳು ವ್ಯತ್ಯಯಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ ತೀರ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ಹೇಳಿದ್ದಾರೆ.
ಚೆನ್ನೈ ಸಹಾಯವಾಣಿ : 26412646, 28170738, 24838968, 24867725,22342355, 24425961, 22420600, 24500923
ಚೆನ್ನೈ, ಕಾಂಚಿಪುರಂ, ಮೇಲ್ ವರವತ್ತೂರು, ಮಹಾಬಲಿಪುರಂನಲ್ಲಿ ಭಾರಿ ಮಳೆಗೆ ಜನತೆ ತತ್ತರಿಸಿದ್ದಾರೆ. ಇಲ್ಲಿಂದ ಮುಂದೆ ಚಂಡಮಾರುತ ಆಂಧ್ರಪ್ರದೇಶ ಕರಾವಳಿ ಪ್ರವೇಶಿಸಿದೆ.
ಕೃಷ್ಣಾ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಪ್ರಕಾಶಂ, ಚಿತ್ತೂರು, ನೆಲ್ಲೂರು ಸೇರಿದಂತೆ ರಾಯಲ ಸೀಮಾದಲ್ಲಿ ಸುಮಾರು 60 ಕಿ.ಮೀ/ ಗಂಟೆ ವೇಗದಲ್ಲಿ ಗಾಳಿ ಬೀಸುತ್ತಿದೆ. ಸುರಕ್ಷಿತ ಸ್ಥಳಗಳಿಗೆ ಸುಮಾರು 4 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.
ಚಂಡಮಾರುತದ ಚಿತ್ರಗಳನ್ನು ಸೆರೆಹಿಡಿಯಲು ಕೆಮರಾ ಹಿಡಿದು ರಸ್ತೆಗಿಳಿದಿದ್ದ ಕೆಲವು ಉತ್ಸಾಹಿ ತರುಣರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಬುದ್ಧಿವಾದ ಹೇಳಿದ ಘಟನೆಯೂ ಚೆನ್ನೈ ಕರಾವಳಿಯಲ್ಲಿ ನಡೆದಿದೆ.
ಕರ್ನಾಟಕದ ಮೇಲೆ ನಿಲಂ ಎಫೆಕ್ಟ್ : ರಾಜ್ಯದ ಪೂರ್ವ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ವಾತಾವರಣ ದಿಢೀರ್ ಎಂದು ತಂಪಾಗಿದೆ. ಸಾಧಾರಣ ಮಳೆ ಇನ್ನೆರಡು ದಿನ ಮುಂದುವರೆಯುವ ಸೂಚನೆಯಿದೆ.
ಹವಾ ಮುನ್ಸೂಚನೆ ಪ್ರಕಾರ ತಂಪಾದ , ಬಲವಾದ ಮೇಲ್ಮೈ ಗಾಳಿ ಬೀಸಲಿದ್ದು, ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಹಗುರ ಇಲ್ಲವೆ ಸಾಧಾರಣ ಮಳೆ ಬೀಳಲಿವೆ. ಇದೇ ರೀತಿ ಇನ್ನು ಎರಡು ದಿನಗಳ ಕಾಲ ಮಳೆ ರಾಜ್ಯದ ಒಳನಾಡಿನಲ್ಲಿ ಮುಂದುವರೆಯಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.












Click it and Unblock the Notifications