ತನ್ನದಲ್ಲದ ತಪ್ಪಿಗೆ ತರುಣಿ ತಲೆ ಉರುಳಿತು

ಗೆಳತಿ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ಸಹಿಸದೆ ಮನನೊಂದ ಯುವತಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ತಿಪ್ಪಸಂದ್ರ ಹೋಬಳಿ ಗೊಲ್ಲರಹಟ್ಟಿಯ ಗಂಗಣ್ಣ, ಗಂಗಮ್ಮರ ಪುತ್ರಿ ಕಲಾವತಿ(18) ಕಿರು ಕುಳಕ್ಕೆ ಬಲಿಯಾದ ದುರ್ದೈವಿ. ಕಲಾವತಿ ಕುಣಿಗಲ್‌ನ ಜಾನ್ಸನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಈಕೆಯೊಂದಿಗೆ ಚೆನ್ನತಿಮ್ಮಯ್ಯನಪಾಳ್ಯದ ಭಾಗ್ಯಮ್ಮ ಎಂಬಾಕೆಯು ಕೆಲಸಕ್ಕೆ ಹೋಗುತ್ತಿದ್ದಳು. ಇವರಿಬ್ಬರು ಒಟ್ಟಿಗೆ ಹೋಗಿಬಂದು ಮಾಡುತ್ತಿದ್ದರು.
ಇತ್ತೀಚೆಗೆ ಭಾಗ್ಯಮ್ಮ ಪ್ರೀತಿಸಿದ ಹುಡುಗನೊಂದಿಗೆ ಮನೆಬಿಟ್ಟು ಹೋಗಿದ್ದಳು. ಇದರಿಂದ ಕುಪಿತಗೊಂಡಿದ್ದ ಭಾಗ್ಯಮ್ಮ ಸಹೋದರರು ಕಲಾವತಿ ಮನೆಗೆ ಬಂದು ಭಾಗ್ಯಮ್ಮಳ ವಿಷಯ ಕೇಳಿದ್ದರು. ಆದರೆ ಭಾಗ್ಯಮ್ಮ ಬಗ್ಗೆ ನನಗೆ ಹೆಚ್ಚಿನ ವಿಷಯ ತಿಳಿದಿಲ್ಲ ಎಂದು ಕಲಾವತಿ ಹೇಳಿದ್ದಳು.
ಅದರೆ, ಕಲಾವತಿ ಮಾತನ್ನು ನಂಬದ ಭಾಗ್ಯಮ್ಮಳ ಸಹೋದರರು ಬೆದರಿಕೆ ಒಡ್ಡಿದ್ದರು. ಕಲಾವತಿಯ ದೂರವಾಣಿ ಸಂಖ್ಯೆ ಪಡೆದಿದ್ದ ಅವರು ಆಗಾಗ ಫೋನ್ ಮಾಡಿ ಧಮಕಿ ಹಾಕುತ್ತಿದ್ದರು ಎನ್ನಲಾಗಿದೆ.
ಕಲಾವತಿ ಮನೆಯವರು ಆಕೆಗೆ ಗಂಡು ನೋಡಿ ಮದುವೆ ಗೊತ್ತು ಮಾಡಿದ್ದರು. ಆದರೆ, ಭಾಗ್ಯಮ್ಮ ಸಹೋದರರು ಕಲಾವತಿ ಮನೆಗೆ ಬಂದು ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಸಂಗವೂ ನಡೆದಿದೆ.
ಇದರಿಂದ ಮನನೊಂದ ಕಲಾವತಿ ತನ್ನ ಗುಡಿಸಲಿಗೆ ಹೋಗಿ 10 ರೂ. ನೋಟಿನ ಮೇಲೆ ಯುವಕರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಕುದೂರು ಠಾಣೆ ಪೊಲೀಸರು ರವಿ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಲಾವತಿ ಶವವನ್ನು ಪರೀಕ್ಷೆಗಾಗಿ ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಲಾಗಿದೆ.












Click it and Unblock the Notifications